ಬಲರಾಂಪುರ (ಉತ್ತರ ಪ್ರದೇಶ):ಹಥ್ರಾಸ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದ 19 ವರ್ಷದ ಯುವತಿಯ ಮೃತದೇಹವನ್ನು ಬಲವಂತವಾಗಿ ದಹನ ಮಾಡಿದ ಕೆಲವೇ ಗಂಟೆಗಳ ಬಳಿಕ ಇದೇ ರೀತಿಯ ಮತ್ತೊಂದು ಘಟನೆಯನ್ನು ಬಲರಾಂಪುರದಿಂದ ವರದಿಯಾಗಿದೆ. 22 ವರ್ಷದ ಮಹಿಳೆಯನ್ನು ಅಪಹರಿಸಿದ ಕಾಮುಕರು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.
ಜಿಲ್ಲೆಯ ಗೈಸಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಮಹಿಳೆ ಮಂಗಳವಾರ ಸಂಜೆ ಮನೆಗೆ ವಾಪಸ್ ಆಗದ ಕಾರಣ ಪೋಷಕರು ಆಕೆಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ, ಹೀಗಾಗಿ ಆಕೆಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸಿದ್ದಾರೆ ಎಂದು ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ದೇವ್ ರಂಜನ್ ವರ್ಮಾ ತಿಳಿಸಿದ್ದಾರೆ.
ಕಾಲೇಜಿಗೆ ಪ್ರವೇಶ ಪಡೆಯಲು ಆಕೆ ಹೊರ ಹೋಗಿದ್ದಳು. ಸಂಜೆ 7 ಗಂಟೆ ಸುಮಾರಿಗೆ ಅವಳು ತುಂಬಾ ಕೆಟ್ಟ ಸ್ಥಿತಿಯಲ್ಲಿ ಮನೆಗೆ ಬಂದಳು ಮತ್ತು ಆಕೆಗೆ ಒಂದು ಮಾತನ್ನೂ ಆಡಲು ಸಾಧ್ಯವಾಗುತ್ತಿರಲಿಲ್ಲ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇವೆ ಎಂದು ಸಂತ್ರೆಸ್ತೆಯ ತಾಯಿ ತಿಳಿಸಿದ್ದಾರೆ.
ನನ್ನ ಮಗಳನ್ನು ಮೂರರಿಂದ ನಾಲ್ಕು ಜನ ಅಪಹರಿಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು, ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅವಳ ಕಾಲುಗಳು, ಸೊಂಟ ಮುರಿದುಹೋಗಿತ್ತು. ಈ ಕ್ರೂರ ಅತ್ಯಾಚಾರ ಮತ್ತು ಚಿತ್ರಹಿಂಸೆ ನಂತರ, ದುಷ್ಕರ್ಮಿಗಳು ಅವಳನ್ನು ಇ-ರಿಕ್ಷಾದಲ್ಲಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಮನೆಗೆ ಬಂದ ನನ್ನ ಮಗಳು ತಾನು ಬದುಕಬೇಕೆಂದು ಬಯಸಿದ್ದಳು. ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆದೆವು, ಆದರೆ ಆಕೆ ಬದುಕುಳಿಯಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಪೋಷಕರ ದೂರಿನ ಮೇರೆಗೆ ಶಾಹಿದ್ ಮತ್ತು ಸಾಹಿಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.