ಕಾನ್ಪುರ(ಉತ್ತರ ಪ್ರದೇಶ): ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆಯ ಮತ್ತೊಬ್ಬ ಸಹಾಯಕನಾಗಿದ್ದ ಹಾಗೂ ಹತ್ಯೆಗೀಡಾದ ಪ್ರಭಾತ್ ಮಿಶ್ರಾ ಅವರ ತಂದೆ ರಾಜೇಂದ್ರ ಮಿಶ್ರಾ ಎಂಬಾತನನ್ನು ಶಿವರಾಜ್‌ಪುರ ಪ್ರದೇಶದ ಕಾರ್ಖಾನೆಯೊಂದರ ಬಳಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 3 ರಂದು ಬಿಕ್ರು ಪ್ರದೇಶದಲ್ಲಿ ನಡೆದ ಶೂಟೌಟ್‌ಗೆ ಎಂಟು ಮಂದಿ ಪೊಲೀಸರು ಬಲಿಯಾಗಿದ್ದು, ಈ ಕೇಸ್ಗೆ ಸಂಬಂಧಿಸಿದಂತೆ ರಾಜೇಂದ್ರ ಮಿಶ್ರಾ ಮೇಲೆ 147, 148, 149, 302, 307, 394, 120 ಬಿ, 7 ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ (ಸಿಎಲ್‌ಎ) ಮತ್ತು 3/25 ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಜುಲೈ 3 ರ ಶೂಟೌಟ್ ಪ್ರಕರಣದ ನಂತರ ವಿಕಾಸ್ ದುಬೆ ಬಂಧಿಸಲಾಗಿತ್ತು. ಆದರೆ ಬಳಿಕ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದ. ದುಬೆ ಹತ್ಯೆ ಬಳಿಕ ರಾಜೇಂದ್ರ ಮಿಶ್ರಾ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ಶರಣಾಗುವ ಸಲುವಾಗಿ ಸಹಾಯ ಪಡೆಯಲು ಪರಿಚಯಸ್ಥರ ಮನೆಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇನ್ನು ರಾಜೇಶ್ ಮಿಶ್ರಾನನ್ನು ಬಂಧಿಸಿ ವಿಚಾರಿಸಿದಾಗ, ಜುಲೈ 3 ರಂದು ನಡೆದ ಶೂಟೌಟ್ನಲ್ಲಿ ತಾನು ಮತ್ತು ಆತನ ಮಗ ಪ್ರಭಾತ್ ಮಿಶ್ರಾ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿದ್ದ ರಾಜೇಂದ್ರ ಮಿಶ್ರಾ ಪುತ್ರ ಪ್ರಭಾತ್ನನ್ನು ಶೂಟೌಟ್ ನಡೆದ ಒಂದು ವಾರದಲ್ಲಿ ಹರಿಯಾಣದ ಫರಿದಾಬಾದ್ನಲ್ಲಿ ಬಂಧಿಸಲಾಗಿತ್ತು ಹಾಗೂ ಈ ವೇಳೆ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.