ಮುಂಬೈ: ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಅನಾಮದೇಯನೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಉದಿತ್ ನಾರಾಯಣ್, ಎರಡು ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದು, ಅನಾಮದೇಯ ವ್ಯಕ್ತಿ ತಿಂಗಳಿನಿಂದಲೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಆದರೆ, ಆತ ಯಾವುದೇ ಹಣಕ್ಕೆ ಬೇಡಿಕೆ ಇಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಕರೆ ಮಾಡಿದ ಸಂಖ್ಯೆ ಆಧಾರದ ಮೇಲೆ ಆರೋಪಿಯ ಬೆನ್ನು ಬಿದ್ದಿದ್ದಾರೆ. ಈ ಆರೋಪಿ ಬಿಹಾರ ಮೂಲದವ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆರೋಪಿಯನ್ನು ಸೆರೆಹಿಡಿಯಲು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಲಾಗಿದೆ.
ಪಶ್ಚಿಮ ಅಂಧೇರಿಯಲ್ಲಿ ನೆಲೆಸಿರುವ ನಾರಾಯಣ್ ಅವರು ಎರಡು ವಾರಗಳ ಹಿಂದೆ ಅಂಬೋಲಿ ಪೊಲೀಸರನ್ನು ಸಂಪರ್ಕಿಸಿ, ಈ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿ ಪ್ರಾರ್ಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಯಿಂದ ಎರಡು ಮೂರು ಬಾರಿ ಕರೆ ಬಂದಿದ್ದು, ನಾರಾಯಣ್ಗೆ ನಿಂದನೆ ಮಾಡಿದ್ದಲ್ಲದೆ, ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಈ ಸಬಂಧ ಮಾಹಿತಿ ನೀಡಿದ್ದಾರೆ.
ಬೆದರಿಕೆ ಬಂದಿರುವ ಕರೆಯ ನಂಬರ್ ನಾರಾಯಣ್ ವಾಸವಿದ್ದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಹೆಸರಿನಲ್ಲಿದ್ದು, ಈ ಸಂಬಂಧ ಸೆಕ್ಯುರಿಟಿ ವಿಚಾರಿಸಿದಾಗ, ತಾನು ಮೊಬೈಲ್ ಕಳೆದುಕೊಂಡಿದ್ದೇನೆ ಯಾರೋ ನನ್ನ ಮೊಬೈಲ್ ಬಳಸಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.