ಗುವಾಹಟಿ(ಅಸ್ಸೋಂ):ಅಸ್ಸೋಂನಲ್ಲಿ ಸುರಿಯುತ್ತಿರುವ ರಣಭೀಕರ ಮಳೆ ಜನ ಜೀವನಕ್ಕಷ್ಟೇ ಅಲ್ಲದೆ ಪ್ರಾಣಿಗಳ ಜೀವನಕ್ಕೂ ಕುತ್ತು ತಂದಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.60 ರಷ್ಟು ಪ್ರದೇಶ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ.
ಪೊಬಿಟೋರಾ ವನ್ಯಜೀವಿ ಅಭಯಾರಣ್ಯದಲ್ಲಿ ಸೋಮವಾರ ಒಂದು ಖಡ್ಗಮೃಗದ ಕಳೇಬರ ಪತ್ತೆಯಾಗಿದೆ. ಪ್ರವಾಹದಿಂದಾಗಿ ಪ್ರಾಣಿಗಳ ಜೀವಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಸ್ಸೋಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ವಿಶ್ವದ ಅತಿದೊಡ್ಡ ಮತ್ತು ಭಾರತೀಯ ಏಕ-ಕೊಂಬಿನ ಖಡ್ಗಮೃಗಗಳಿಗೆ ನೆಲೆಯಾಗಿದೆ.
ದಿಕ್ಕಾಪಾಲಾದ ಕಾಜಿರಂಗದ ಪ್ರಾಣಿಗಳ ಸ್ಥಿತಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ವಾಹನಗಳಡಿ ಸಿಲುಕಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿತ್ತು. ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ವೇಗವನ್ನು ಮಿತಿಗೊಳಿಸಲು ಟೈಮ್ ಕಾರ್ಡ್ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಲಾಗುತ್ತಿತ್ತು. ಆದರೆ ಈಗ ಪ್ರವಾಹ ಕಾರಣದಿಂದಾಗಿ ಅತೀ ಹೆಚ್ಚು ಪ್ರಾಣಿಗಳು ಅಪಾಯದಲ್ಲಿವೆ.
ಉದ್ಯಾನವನ ಪ್ರಾಧಿಕಾರವು ವೇಗ ಮಿತಿಯನ್ನು ಉಲ್ಲಂಘಿಸಿದವರಿಗೆ 5000 ರೂ. ದಂಡ ವಿಧಿಸುವ ಚಿಂತನೆಯಲ್ಲಿದೆ. ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿರುತ್ತದೆ. ಏಕೆಂದರೆ ವಿವಿಧ ಪ್ರಾಣಿಗಳು ಪ್ರವಾಹದ ಸಮಯದಲ್ಲಿ ಉದ್ಯಾನದ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುವುದರಿಂದ ಅವು ವಾಹನಗಳ ಅಡಿಗೆ ಸಿಲುಕಿ ಅಪಾಯಕ್ಕೊಳಗಾಗುವ ಸಂಭವ ಹೆಚ್ಚಾಗಿರುತ್ತದೆ.
ಜೋರ್ಹತ್, ತೇಜ್ಪುರ್, ಗುವಾಹಟಿ, ಗೋಲ್ಪಾರ ಮತ್ತು ಧುಬ್ರಿ ಜಿಲ್ಲೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟಕ್ಕಿಂತ ಹರಿಯುತ್ತಿದೆ ಎಂದು ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಪ್ರವಾಹ ವರದಿಯಲ್ಲಿ ತಿಳಿಸಲಾಗಿದೆ.