ಅಮರಾವತಿ(ಆಂಧ್ರ ಪ್ರದೇಶ):16,200 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗಳ ಹಾಗೂ ವೈದ್ಯಕೀಯ ಕಾಲೇಜುಗಳ ಪುನಶ್ಚೇತನಕ್ಕೆ ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ಎಲ್ಲ ಗ್ರಾಮಗಳಲ್ಲಿ 10,000 ಹೆಲ್ತ್ ಕ್ಲಿನಿಕ್ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ.
ಆಂಧ್ರದಲ್ಲಿ ಗ್ರಾಮ ಮಟ್ಟದಲ್ಲಿ ಸ್ಥಾಪನೆಯಾಗಲಿವೆ 10 ಸಾವಿರ ವೈಎಸ್ಆರ್ ಕ್ಲಿನಿಕ್ಗಳು - ಗ್ರಾಮ ಮಟ್ಟದಲ್ಲಿ ವೈಎಸ್ಆರ್ ಕ್ಲಿನಿಕ್ಗಳು
ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವ ಸಲುವಾಗಿ 16,200 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗಳ ಹಾಗೂ ವೈದ್ಯಕೀಯ ಕಾಲೇಜುಗಳ ಪುನಶ್ಚೇತನ ಹಾಗೂ 10,000 ಹೆಲ್ತ್ ಕ್ಲಿನಿಕ್ಗಳನ್ನು ಸ್ಥಾಪಿಸಲು ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದೆ.

ನಾಡು-ನೇಡು (Then & Now) ಯೋಜನೆ ಕುರಿತು ಸಭೆ ನಡೆಸಿರುವ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ, ಹೆಲ್ತ್ ಕ್ಲಿನಿಕ್ಗಳನ್ನು (ಆರೋಗ್ಯ ಉಪ ಕೇಂದ್ರ) ಸ್ಥಾಪಿಸುವ ವಿಷಯವನ್ನು ಆದಷ್ಟು ಬೇಗ ಪ್ರತಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳ ಜೊತೆ ಪ್ರಸ್ತಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವ ಸಲುವಾಗಿ ಈಗಿರುವ 1,086 ಆರೋಗ್ಯ ಉಪ ಕೇಂದ್ರಗಳ ಹೊರತಾಗಿ, ಹೆಚ್ಚುವರಿಯಾಗಿ 2026 ಕೋಟಿ ರೂ.ಗಳ ಬಜೆಟ್‌ನೊಂದಿಗೆ ಇನ್ನೂ 10 ಸಾವಿರ ಕ್ಲಿನಿಕ್ಗಳನ್ನು ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಜೂನ್ 15ರ ಒಳಗಾಗಿ ಸೂಕ್ತ ಜಾಗಗಳನ್ನು ಗುರುತಿಸಿ 2021ರ ಮಾರ್ಚ್ ಒಳಗೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಗ್ರಾಮಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ಉಪ ಕೇಂದ್ರಗಳನ್ನೂ ವೈಎಸ್ಆರ್ ಹೆಲ್ತ್ ಕ್ಲಿನಿಕ್ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಜಗನ್ ತಿಳಿಸಿದ್ದಾರೆ.