ಅಮರಾವತಿ(ಆಂಧ್ರಪ್ರದೇಶ): ರಾಜ್ಯ ಚುನಾವಣಾ ಆಯುಕ್ತರಾಗಿ ರಮೇಶ್ ಕುಮಾರ್ ಅವರನ್ನು ಮರು ನೇಮಕ ಮಾಡಿ ಎಂದು ಆಂಧ್ರ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ಆದೇಶ ನೀಡಿದೆ.
ಹೈಕೋರ್ಟ್ ಆದೇಶದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಕಳೆದ ಏಪ್ರಿಲ್‌ನಲ್ಲಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ರಮೇಶ್ ಕುಮಾರ್ ಅವರ ಅವಧಿಯನ್ನು 5ರಿಂದ 3 ವರ್ಷಕ್ಕೆ ಇಳಿಸಿ ರಾಜ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಕೆಳಗಿಳಿಸಿತ್ತು.
2016ರಲ್ಲಿ ಎಸ್‌ಇಸಿಯಾಗಿ ಅಧಿಕಾರ ಸ್ವೀಕರಿಸಿದ್ದ ರಮೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯೂಮೂರ್ತಿ ಕನಗರಾಜ್ ನೂತನ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.
ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಮಾರ್ಗಸೂಚಿಗಳ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರಾಗಿದ್ದ ರಮೇಶ್ ಕುಮಾರ್, ಆಂಧ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿಕೆ ಮಾಡಿದ್ದರು. ಇದಕ್ಕೆ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ, ಚುನಾವಣಾ ಆಯುಕ್ತರು ತೆಲುಗು ದೇಶಂ ಪಕ್ಷದ ಪರ ಕೆಲಸ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.