ಅಮರಾವತಿ :ಹೈಕೋರ್ಟ್ ತೀರ್ಪಿನ ಹಿನ್ನೆಲೆ ಎನ್ ರಮೇಶ್‌ಕುಮಾರ್ ಅವರನ್ನು ರಾಜ್ಯ ಚುನಾವಣಾ ಆಯುಕ್ತರಾಗಿ ಮರು ನೇಮಕಗೊಳಿಸಿ ಆಂಧ್ರಪ್ರದೇಶ ಸರ್ಕಾರ ಗುರುವಾರ ತಡರಾತ್ರಿ ಆದೇಶ ಹೊರಡಿಸಿದೆ.
ಎನ್.ರಮೇಶ್ ಕುಮಾರ್ರನ್ನು ಚುನಾವಣಾ ಆಯುಕ್ತರಾಗಿ ಮರುನೇಮಕಗೊಳಿಸಿದ ಆಂಧ್ರ ಸರ್ಕಾರ - ಆಂಧ್ರ ಸರ್ಕಾರದ ಸುಗ್ರಿವಾಜ್ಞೆ ರದ್ದುಗೊಳಿಸಿದ ಹೈಕೋರ್ಟ್
ಸರ್ಕಾರದ ಸುಗ್ರಿವಾಜ್ಞೆಯನ್ನು ಹೈಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆ ಎನ್.ರಮೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರಾಗಿ ಮರುನೇಮಕಗೊಳಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ..

ರಮೇಶ್ ಕುಮಾರ್ ಅವರ ಕಾರ್ಯಾವಧಿಯು ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪಿನ ಮೇಲೆ ನಿರ್ಧರಿತವಾಗಿದೆ ಎಂದು ಸರ್ಕಾರ ಹೇಳಿದೆ. ಆಂಧ್ರಪ್ರದೇಶ ಚುನಾವಣಾ ಆಯುಕ್ತರ ಅಧಿಕಾರವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಸರ್ಕಾರ ಮೊಟಕುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದ ಹಿನ್ನೆಲೆ ಚುನಾವಣಾ ಆಯುಕ್ತರಾಗಿದ್ದ ಎನ್ ರಮೇಶ್‌ಕುಮಾರ್ ಎರಡು ವರ್ಷ ಮೊದಲೇ ತನ್ನ ಸ್ಥಾನವನ್ನು ಕಳೆದುಕೊಂಡಿದ್ದರು. ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕಳೆದ ಮೇ29ರಂದು ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ರದ್ದುಗೊಳಿಸಿತ್ತು.
ಅಲ್ಲದೆ, ನಿವೃತ್ತ ನ್ಯಾಯಾಧೀಶ ವಿ ಕನಗರಾಜ್ ಅವರನ್ನು ನೇಮಕ ಮಾಡುವ ರಾಜ್ಯ ಸರ್ಕಾರದ ಮತ್ತೊಂದು ಆದೇಶವನ್ನೂ ಹೈಕೋರ್ಟ್ ರದ್ದುಗೊಳಿಸಿತ್ತು. ರಮೇಶ್‌ಕುಮಾರ್ ಅವರನ್ನು ಚುನಾವಣಾ ಆಯುಕ್ತರಾಗಿ ಮರು ನೇಮಕಗೊಳಿಸುವಂತೆ ಆದೇಶಿಸಿತ್ತು. ಹೀಗಾಗಿ ಮರು ನೇಮಕ ಮಾಡಲಾಗಿದೆ. ಸದ್ಯ ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಯುತ್ತಿದೆ.