ಅಮರಾವತಿ (ಆಂಧ್ರಪ್ರದೇಶ): ಕೊರೊನಾ ಮಹಾಮಾರಿಯಿಂದ ಜನರಿಗೆ ತೊಂದರೆಯಾಗಿದೆ. ಈ ಬೆನ್ನೆಲ್ಲೆ ಜನರನ್ನು ಕಷ್ಟದಿಂದ ಪಾರುಮಾಡಲು ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ. ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ವ್ಯವಸ್ಥೆ ರೂಪಿಸಲಾಗಿದೆ.
ಇದಕ್ಕಾಗಿ ರಾಜ್ಯಾದ್ಯಂತ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ಸುಮಾರು 4 ಲಕ್ಷ ಮಂದಿ ಸ್ವಯಂಸೇವಕರನ್ನು ನೇಮಕ ಮಾಡಲಾಗಿದೆ. ಇಂದಿನಿಂದ ಅವರು ಪಿಂಚಣಿದಾರರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಿದ್ದಾರೆ.
ಸ್ವಯಂ ಸೇವಕರು ಕೊರೊನಾ ಹರಡದಂತೆ ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ರೀತಿಯ ಪಿಂಚಣಿಗಳನ್ನು ಪಿಂಚಣಿದಾರರಿಗೆ ತಲುಪಿಸಲಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದಾಗಿ 59 ಲಕ್ಷ ಮಂದಿ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇಂದು ಬೆಳಗ್ಗೆ 8.30ಕ್ಕೆ ಸ್ವಯಂಸೇವಕರು ಕಾರ್ಯಗತವಾಗಿದ್ದು, ಸದ್ಯಕ್ಕೆ ಸುಮಾರು 31 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ವಿತರಣೆ ಮಾಡಲಿದ್ದಾರೆ.
ಈ ನೂತನ ವ್ಯವಸ್ಥೆಗೆ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಸರ್ಕಾರದ ಸಲಹೆಗಾರ ಸಜ್ಜಾಲ ರಾಮಕೃಷ್ಣ ರೆಡ್ಡಿ, ಆಂಧ್ರಪ್ರದೇಶದ ಗ್ರಾಮ ಸೇನಾನಿಗಳು ನಗುವನ್ನು ಹರಡಿಸುತ್ತಿದ್ದಾರೆ. ಕೊರೊನಾ ಹರಡದಂತೆ ತಡೆಯಲು ಇವರು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪಿಂಚಣಿ ಮನೆ ಬಾಗಿಲಿಗೆ ತಲುಪಿಸುವವರ ಬಗ್ಗೆ ಹೆಮ್ಮೆಯಿದೆ ಎಂದು ಟ್ವಿಟ್ ಮಾಡಿದ್ದಾರೆ.