ವಿಜಯವಾಡ:ಆಂಧ್ರ ಸರ್ಕಾರ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಮನೆ ಮನೆಗೆ ತೆರಳಿ ವಿದೇಶಿಗರನ್ನು ಪತ್ತೆ ಹಚ್ಚುವ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಸುಮಾರು ಎರಡೂವರೆ ಲಕ್ಷ ಸ್ವಯಂ ಸೇವಕರನ್ನು ನೇಮಕ ಮಾಡಿದೆ. ಪ್ರತಿಯೊಬ್ಬರಿಗೂ 50 ಕುಟುಂಬಗಳನ್ನು ಸ್ಕ್ರೀನಿಂಗ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಈಗ ಸದ್ಯಕ್ಕೆ 1,43,91,654 ಮನೆಗಳಲ್ಲಿ ಒಟ್ಟು 1,38,58,747 ಕುಟುಂಬಗಳನ್ನು ಸ್ವಯಂಸೇವಕ ಜಾಲದಿಂದ ಸ್ಕ್ರೀನಿಂಗ್ ಮಾಡಲಾಗಿದೆ. ಭಾರತ ಸರ್ಕಾರದಿಂದ ಮಾಹಿತಿ ಪಡೆದು ರಾಜ್ಯದಲ್ಲಿರುವ 10 ಸಾವಿರ ವಿದೇಶಿ ಪ್ರಜೆಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ140 ಮಂದಿಗೆ ಸೋಂಕಿನ ಲಕ್ಷಣಗಳಿದ್ದು ಉಳಿದ 9,860 ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ.
ಕೊರೊನಾ ಪತ್ತೆಹಚ್ಚಲು ಮನೆ ಮನೆಗೆ ಬರ್ತಾರೆ ಸ್ವಯಂಸೇವಕರು: ಆಂಧ್ರ ಸರ್ಕಾರದ ಕ್ರಮ - ಜಗನ್ಮೋಹನ್ ರೆಡ್ಡಿ
ಕೊರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ರಾಜ್ಯಗಳು ಕಟ್ಟುನಿಟ್ಟಾಗಿ ಕೇಂದ್ರ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕೆಂದು ಮನವಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚೋದು ಮಾತ್ರ ಅಲ್ಲ. ಸ್ಕ್ರೀನಿಂಗ್ ಮಾಡಿದ ಕುಟುಂಬಗಳಿಗೆ ಕೊರೊನಾ ಬರದಂತೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕೂಡಾ ಮಾಹಿತಿ ನೀಡುವ ಜವಾಬ್ದಾರಿಯನ್ನು ಸ್ವಯಂಸೇವಕರು ಹೊಂದಿದ್ದಾರೆ. ಈ ಅಭಿಯಾನದಿಂದ ರಾಜ್ಯದ ಪ್ರತಿಯೊಂದು ಮನೆಯನ್ನು ಸ್ಕ್ರೀನಿಂಗ್ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಅಭಿಯಾನ ಈಗ ರಾಜ್ಯದೆಲ್ಲೆಡೆ ವ್ಯಾಪಿಸುತ್ತಿದ್ದು ದಾಖಲೆಗಳಿಲ್ಲದೇ ರಾಜ್ಯದಲ್ಲಿ ಇರುವವರನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತಿದೆ. ಓರ್ವ 50 ಕುಟುಂಬಗಳಿಗೆ ಜವಾಬ್ದಾರಾಗಿದ್ದು, ಸೋಂಕಿನ ಲಕ್ಷಣಗಳಿರುವ ವ್ಯಕ್ತಿ ಕಂಡುಬಂದಲ್ಲಿ ಸ್ವಯಂ ಸೇವಕರು ತಮಗೆ ಸರ್ಕಾರ ನೀಡಿದ ಮೊಬೈಲ್ ಅಪ್ಲಿಕೇಶನ್ನಲ್ಲಿ ದಾಖಲಿಸಬೇಕಾಗುತ್ತದೆ. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ವಿಚಾರಣೆ ಮಾಡುತ್ತದೆ. ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.