ಆಂಧ್ರ ಪ್ರದೇಶ: ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನೇ ಸರಿಯಾದ ವಿಧಾನದಲ್ಲಿ ಬಳಸಿಕೊಂಡಿರುವ ಆಂಧ್ರ ಪ್ರದೇಶದ ವಿಜಯವಾಡದ ಕೆಬಿಎನ್ ಕಾಲೇಜಿನ ಎಂಎಸ್ಸಿ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ತ್ಯಾಜ್ಯದಿಂದ ಕೈಗಾರಿಕಾ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಕಚ್ಚಾ ತೈಲವನ್ನು ತಯಾರಿಸಿ ವಿಶೇಷತೆ ಮೆರೆದಿದ್ದಾರೆ.
ಪ್ರಾಧ್ಯಾಪಕರ ಮಾರ್ಗದರ್ಶನದೊಂದಿಗೆ ಎಂಎಸ್ಸಿ ಸಾವಯವ ರಸಾಯನಶಾಸ್ತ್ರ ವಿಭಾಗದ ಶಿವ, ಪವನ್ ಕುಮಾರ್ ಹಾಗೂ ಹರೀಶ್ ಕುಮಾರ್ ಎಂಬ ವಿದ್ಯಾರ್ಥಿಗಳು ಪಿವಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಟ್ಟಾಗ ಹೊರಬರುವ ಆವಿಯಿಂದ ಕಚ್ಚಾ ತೈಲ ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. 2 ಕೆಜಿ ಪ್ಲಾಸ್ಟಿಕ್ ತ್ಯಾಜ್ಯದಿಂದ 100 ಗ್ರಾಂ ಕಚ್ಚಾ ತೈಲವನ್ನು ಉತ್ಪಾದಿಸಲಾಗಿದೆ. ಇದರ ಮಾದರಿಯನ್ನು ತಮ್ಮ ಕಾಲೇಜಿನಲ್ಲಿ ನಡೆದ ಟೆಕ್ ಫೆಸ್ಟ್‌ನಲ್ಲಿ ಪ್ರದರ್ಶಿಸಿದ್ದಾರೆ.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ವಿದ್ಯಾರ್ಥಿ ಶಿವ, ನಾವು ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲವನ್ನು ಉತ್ಪಾದಿಸಿದ್ದೇವೆ. ಇದನ್ನು ಸಣ್ಣ ಪ್ರಮಾಣದ ವಿಧಾನ ಹಾಗೂ ದೊಡ್ಡ ಪ್ರಮಾಣದ ವಿಧಾನ ಎಂಬ ಎರಡು ಮಾರ್ಗಗಳ ಮೂಲಕ ಸಾಧಿಸಲಾಗಿದೆ. ನಾವು ಪಾಲಿವಿನೈಲ್ ಕ್ಲೋರೈಡ್ ಅನ್ನು ಬಿಸಿ ಮಾಡಿದಾಗ, ಆವಿಯ ರೂಪದಲ್ಲಿ ಕಚ್ಚಾ ತೈಲವನ್ನು ಪಡೆಯುತ್ತೇವೆ. ಬಳಿಕ ಈ ಕಚ್ಚಾ ತೈಲವನ್ನು ಪೈರೋಲಿಸಿಸ್ ಪ್ರಕ್ರಿಯೆಗೆ ಒಳಪಡಿಸಿದಾಗ ನಮಗೆ ಪೆಟ್ರೋಲ್ ಸಿಗುತ್ತದೆ ಎಂದು ಹೇಳುತ್ತಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲ ಉತ್ಪಾದನೆ ಈ ಪ್ರಾಜೆಕ್ಟ್ಗೋಸ್ಕರ ವಿದ್ಯಾರ್ಥಿಗಳು ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ಯೋಜನೆಯಲ್ಲಿ, ನಾವು ಪಾಲಿವಿನೈಲ್ ಕ್ಲೋರೈಡ್ ಪ್ಲಾಸ್ಟಿಕ್ ಬಳಸಿ, 200-400 ಡಿಗ್ರಿ ಸೆಂಟಿಗ್ರೇಡ್ನಲ್ಲಿ ಪೈರೋಲಿಸಿಸ್ ಪ್ರಕ್ರಿಯೆಯೊಂದಿಗೆ ಕಚ್ಚಾ ತೈಲವನ್ನು ಉತ್ಪಾದಿಸಿದ್ದೇವೆ. ಈ ಕಚ್ಚಾ ತೈಲವನ್ನು ಪೆಟ್ರೋಲ್, ಡೀಸೆಲ್ನಂತಹ ವಿವಿಧ ಇಂಧನಗಳನ್ನ ತಯಾರಿಸಬಹುದಾಗಿದೆ. ಈ ಮೂಲಕ ನಾವು ಒಂದು ಲೀಟರ್ ಪೆಟ್ರೋಲ್ ಅನ್ನು 30-40 ರೂಪಾಯಿಗೆ ಪಡೆಯಬಹುದಾಗಿದೆ. ವಿವಿಧ ಬಗೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಾವು ಈ ಪ್ರಕ್ರಿಯೆ ಮಾಡಿದೆವು. ಆದರೆ ಪಿವಿಎಸ್ ಪೈಪ್ಗಳ ತ್ಯಾಜ್ಯದಿಂದ ಉತ್ತಮ ಫಲಿತಾಂಶ ಬಂದಿದೆ ಎನ್ನುತ್ತಾರೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣವೇಣಿ ತಿಳಿಸಿದರು.
ಪ್ರತಿನಿತ್ಯ ಸಾವಿರಾರು ಟನ್ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನ ವಿಲೇವಾರಿ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ಏಕ-ಬಳಕೆಯ ಪ್ಲಾಸ್ಟಿಕ್ ಆಗಿದ್ದರೆ, ಇನ್ನೂ ಕೆಲವು ಬಾಳಿಕೆ ಬರುವ ಪ್ಲಾಸ್ಟಿಕ್ ಆಗಿದೆ. ವಿನೈಲ್ ಕ್ಲೋರೈಡ್‌ನ ಪಾಲಿಮರೀಕರಣದಿಂದ ಅಧಿಕ ಸಾಂದ್ರತೆಯ ಪ್ಲಾಸ್ಟಿಕ್ ಅನ್ನು ತಯಾರಿಸಲಾಗುತ್ತದೆ. ಬಾಟಲಿಗಳ ಮುಚ್ಚಳಗಳು, ಪೈಪ್ಗಳನ್ನು ಇದರಿಂದಲೇ ತಯಾರಿಸಲಾಗುತ್ತದೆ. ಬಾಟಲಿ ಮುಚ್ಚಳಗಳು, ಒಡೆದ ಪೈಪ್ಗಳನ್ನ ಎಸೆಯುವುದರಿಂದ ನಾವು ಮಾಲಿನ್ಯವನ್ನ ಹೆಚ್ಚಿಸುತ್ತಿದ್ದೇವೆ. ಹೀಗೆ ಮಾಲಿನ್ಯಕ್ಕೆ ದಾರಿ ಮಾಡಿಕೊಡುವ ಬದಲಿಗೆ ಇದೇ ತ್ಯಾಜ್ಯಗಳನ್ನ ಮರು ಬಳಕೆ ಮಾಡಿಕೊಂಡು ಈ ಮೂವರು ಎಂಎಸ್ಸಿ ವಿದ್ಯಾರ್ಥಿಗಳು ಪೆಟ್ರೋಲ್ ತಯಾರಿಸಿರುವುದು ಹೆಮ್ಮೆಯ ವಿಷಯ.