ಅಮರಾವತಿ(ಆಂಧ್ರಪ್ರದೇಶ):ರಾಜ್ಯದ ರೈತರ ಕಷ್ಟಗಳಿಗೆ ಹತ್ತಿರವಾಗುವ ಉದ್ದೇಶದಿಂದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಇಂದು ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದ್ದಾರೆ.
ರೈತರಿಗೆ ಉಚಿತವಾಗಿ ಬೋರ್ವೆಲ್ ಕೊರೆಯುವ ಉದ್ದೇಶದಿಂದ 'ವೈಎಸ್ಆರ್ ಜಲ - ಕಲ' ಯೋಜನೆಗೆ ಅವರು ಚಾಲನೆ ನೀಡಿದ್ದು, ಬರೋಬ್ಬರಿ 2,340 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಯೋಜನೆ ಇದಾಗಿದೆ. ಐದು ಲಕ್ಷ ಎಕರೆಗಳಿಗೆ ನಿರಾವರಿ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಇದರಿಂದ ಮೂರು ಲಕ್ಷ ರೈತರಿಗೆ ಅನುಕೂಲವಾಗಲಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಎರಡು ಲಕ್ಷ ಬೋರ್ವೆಲ್ ಕೊರೆಸಲಾಗುತ್ತದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿರುವ ಮುಖ್ಯಮಂತ್ರಿ ಜಗನ್ಮೋಹನ್, ರೈತರ ಕಷ್ಟಗಳೊಂದಿಗೆ ನಾವು ಸದಾ ನಿಂತುಕೊಳ್ಳುತ್ತೇವೆ. ಈ ಯೋಜನೆಯಲ್ಲಿ ಎರಡು ಲಕ್ಷ ಬೋರ್ವೆಲ್ ಕೊರೆಯಲು ಯೋಜಿಸಲಾಗಿದ್ದು, ಇದರ ಜತೆಗೆ ಕೇಸಿಂಗ್ ಪೈಪ್ ಸಹ ಉಚಿತವಾಗಿ ನೀಡುತ್ತೇವೆ ಎಂದಿದ್ದಾರೆ.
ಈ ಹಿಂದೆ ಚುನಾವಣೆ ವೇಳೆ, ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ ಇದು ಒಂದಾಗಿದೆ. ಜಲ ವಿಜ್ಞಾನದ ಮಾಹಿತಿ ಬಳಸಿಕೊಂಡು ಬೋರ್ವೆಲ್ ಎಲ್ಲಿ ಕೊರೆಯಬೇಕು ಎಂಬುದನ್ನ ಅಧಿಕಾರಿಗಳು ನಿರ್ಧರಿಸುತ್ತಾರೆ. ಈ ಹಿಂದೆ ನಾನು 3,650 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದ ವೇಳೆ ರೈತರು ಎದುರಿಸುತ್ತಿದ್ದ ತೊಂದರೆಗಳ ಬಗ್ಗೆ ಖುದ್ದಾಗಿ ತಿಳಿದು ಕೊಂಡಿದ್ದೇನೆ.
ಇಂದು 136 ಬೋರ್ವೆಲ್ ಕೊರೆಯಲು ನಿರ್ಧರಿಸಲಾಗಿದ್ದು, 144 ಗ್ರಾಮೀಣ ಕ್ಷೇತ್ರ ಮತ್ತು 19 ಅರೆ ನಗರ ಕ್ಷೇತ್ರಗಳಾಗಿವೆ ಎಂದಿದ್ದಾರೆ. ಈ ಯೋಜನೆ ಲಾಭ ಪಡೆದುಕೊಳ್ಳಲು ರೈತರು ಆನ್ಲೈನ್ ಅರ್ಜಿ (www.ysrjalakala.ap.gov.in) ಸಲ್ಲಿಕೆ ಮಾಡಬಹುದಾಗಿದ್ದು, ಅಥವಾ ಗ್ರಾಮ ಕಾರ್ಯದರ್ಶಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ. ಐದು ಎಕರೆ ಕೃಷಿ ಭೂಮಿ ಹೊಂದಿರುವ ರೈತರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.