ಅಮರಾವತಿ (ಆಂಧ್ರ ಪ್ರದೇಶ): ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಮರಣ ದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ'ದಿಶಾ ಕಾಯ್ದೆ' ಎಂಬ ಕರಡು ಮಸೂದೆಯನ್ನು ಆಂಧ್ರ ಸಚಿವ ಸಂಪುಟ ಅಂಗೀಕರಿಸಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅತ್ಯಾಚಾರ, ಆ್ಯಸಿಡ್ ದಾಳಿ, ಲೈಂಗಿಕ ದೌರ್ಜನ್ಯ ಸೆರಿದಂತೆ ಮಕ್ಕಳು ಹಾಗೂ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವಿಚಾರಣೆಯನ್ನು 14 ದಿನಗಳಲ್ಲಿ ಮುಗಿಸುವ ಹಾಗೂ ಆರೋಪಿಗಳಿಗೆ 21 ದಿನಗಳ ಒಳಗಾಗಿ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡುವ 'ಎಪಿ ದಿಶಾ ಕಾಯ್ದೆ' ಎಂಬ ಹೆಸರಿನಲ್ಲಿ ಆಂಧ್ರ ಪ್ರದೇಶ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ಅನುಮೋದನೆ ನೀಡಲಾಯಿತು.
ಅಲ್ಲದೇ 'ಮಹಿಳಾ ಮತ್ತು ಮಕ್ಕಳ ಕಾಯ್ದೆ-2019' ಅಡಿಯಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲಿನ ನಿರ್ದಿಷ್ಟ ಅಪರಾಧ ಪ್ರಕರಣಗಳನ್ನು ಬಗೆಹರಿಸಲು, ಪ್ರತಿ ಜಿಲ್ಲೆಗಳಲ್ಲಿ 'ಎಪಿ ವಿಶೇಷ ನ್ಯಾಯಾಲಯ'ಗಳನ್ನು ಸ್ಥಾಪಿಸಲು ಸಹ ಸಂಪುಟ ಅನುಮೋದಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಪೋಸ್ಟ್ಗಳನ್ನು ಮಾಡುವವರ ವಿರುದ್ಧ ಐಪಿಸಿ ಸೆಕ್ಷನ್ 354 (ಇ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಮೊದಲ ಬಾರಿ ಕೃತ್ಯ ಎಸಗಿದ ತಪ್ಪಿತಸ್ಥನಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಎರಡನೇ ಬಾರಿ ಕೃತ್ಯ ಎಸಗಿದವರಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು. ಅಲ್ಲದೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಆರೋಪಿಗಳಿಗೆ ಐಪಿಸಿ ಸೆಕ್ಷನ್ 354 (ಎಫ್) ಪ್ರಕಾರ 10-14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಅಪರಾಧ ಘೋರವಾಗಿದ್ದಲ್ಲಿ ಪೋಕ್ಸೋ ಕಾಯ್ದೆಯಡಿ ಶಿಕ್ಷೆಯ ಅವಧಿಯನ್ನು ವಿಸ್ತರಿಸಿ, 14 ರಿಂದ 18 ವರ್ಷಗಳ ಜೀವಾವಧಿ ಶಿಕ್ಷೆ ನೀಡಲಾಗುವುದು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆರೋಪಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ನೀಡುವ 'ದಿಶಾ ಕಾಯ್ದೆ' ಮಸೂದೆಗೆ ಅನುಮೋದನೆ ನೀಡಿದ್ದಾರೆ.