ವಿಜಯನಗರ (ಆಂಧ್ರ ಪ್ರದೇಶ): ಮದುವೆಗೆ 16 ಜನರನ್ನು ಕರೆದೊಯ್ಯುತ್ತಿದ್ದ ಕಾರು ವಿಜಯನಗರದಲ್ಲಿ ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಪ್ರಾಣಾಪಾಯದಿಮದ ಪಾರಾಗಿದ್ದಾರೆ.
ವಿಜಯನಗರದ ಗರುಗುಬಿಲ್ಲಿ ಮಂಡಲದ ಎರ್ರನ್ನಗುಡಿ ಜಂಕ್ಷನ್‌ನಲ್ಲಿ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಕಾರ್ನಲ್ಲಿ ಒಂಬತ್ತು ಹಿರಿಯರು ಮತ್ತು ಏಳು ಮಕ್ಕಳು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪಾರ್ವತಿಪುರಂನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು ಎಂದು ಹೇಳಿದ್ದಾರೆ.
"ಮಳೆಯಿಂದಾಗಿ ರಸ್ತೆ ಒದ್ದೆಯಾಗಿತ್ತು. ಪ್ರಯಾಣಿಕರು ಪಾರ್ವತಿಪುರಂ ಮಂಡಲದ ಹಿಂದೂಪುರಂ ಗ್ರಾಮದಿಂದ ಗರುಗುಬಿಲ್ಲಿ ಮಂಡಲದ ರವಿಪಲ್ಲಿ ಗ್ರಾಮಕ್ಕೆ ಹೋಗುತ್ತಿದ್ದರು. ಸೆಕ್ಷನ್ 337ರ ಅಡಿ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.