ನವದೆಹಲಿ:ಇದು ನನ್ನ ಕೊನೆಯ ಫೋಟೋ ಇರಬಹುದೇನೋ..! ಹಾಗಂತ ವಾಟ್ಸಪ್ ಫ್ಯಾಮಿಲಿ ಗ್ರೂಪ್‌ನಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಗೆ ಮೇಜರ್ ಕೇತನ್ ಶರ್ಮಾ ಫೋಟೋ ಕಳುಹಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರು ಇಹಲೋಕ ತ್ಯಜಿಸಿದ್ದರು. ಕಳೆದ ಸೋಮವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ಜೊತೆ ಹೋರಾಟ ನಡೆಸುತ್ತಿರುವಾಗ ಅವರು ಗುಂಡಿನ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.
ನಿನ್ನೆ ಸ್ವಂತ ಊರು ಉತ್ತರ ಪ್ರದೇಶದ ಮೀರಠ್‌ಗೆ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಈ ವೇಳೆ ತಾಯಿ ಉಷಾ ಉಮ್ಮಳಿಸಿ ಬಂದ ದು:ಖವನ್ನು ತಡೆದುಕೊಂಡು, ನನ್ನ ಧೈರ್ಯಶಾಲಿ ಮಗ ಬುಲೆಟ್‌ಗಳಿಗೆ ಅಂಜುವವನಲ್ಲ. ನನ್ನ ಮಗ ಎಲ್ಲಿ ಹೋದ? ಅವನು ಎಷ್ಟು ಹೊತ್ತಿಗೆ ಬರುತ್ತಾನೆ? ಅವನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದೆಲ್ಲಾ ಮೀರಠ್‌ನ ಕಂಟೋನ್ಮೆಂಟ್ ಮನೆಯಲ್ಲಿ ಆರ್ಮಿ ಅಧಿಕಾರಿಗಳ ಜೊತೆ ಈ ರೀತಿ ಬಿಕ್ಕಿ ಬಿಕ್ಕಿ ಹೇಳುತ್ತಿದ್ದರಂತೆ.
ಸೋಮವಾರ ಮುಂಜಾವು ಕಾಶ್ಮೀರದ ಬದೂರಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರ ಸಂಹಾರ ನಡೆಸುವುದಕ್ಕೆ ಸೇನೆ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ರಾಷ್ಟ್ರೀಯ ರೈಫಲ್ಸ್‌ನ ಕೇತನ್ ತೀವ್ರವಾಗಿ ಗಾಯಗೊಂಡಿದ್ದರು.
ಕೇತನ್ ವಿವಾಹಿತರಾಗಿದ್ದು, ಪತ್ನಿ, ನಾಲ್ಕು ವರ್ಷದ ಪುತ್ರಿ ಹಾಗು ತಂದೆ ತಾಯಿಯನ್ನು ಅಗಲಿದ್ದಾರೆ. ಕೇತನ್ ಕೊನೆಯ ಬಾರಿ ಕುಟುಂಬದ ಜೊತೆ ಮಾತನಾಡುವಾಗ, ಕಾಶ್ಮೀರಕ್ಕೆ ಬಂದು ಅಮರನಾಥ ಯಾತ್ರೆ ಮಾಡುವಂತೆ ತಿಳಿಸಿದ್ದರಂತೆ. ಇಲ್ಲಿ ಸೇನೆ ನಿಮಗೆ ಪೂರ್ಣ ಭದ್ರತೆ ನೀಡಲಿದೆ ಭಯಪಡಬೇಡಿ ಎಂದು ಧೈರ್ಯ ತುಂಬಿದ್ದರಂತೆ.
ಕೇತನ್ ಶರ್ಮಾ ಮೃತದೇಹವನ್ನು ತ್ರಿವರ್ಣ ಬಾವುಟ ಹೊದಿಸಿ ಗ್ರಾಮಕ್ಕೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಾಯಿ ಹಾಗು ಪತ್ನಿ ಅಳುತ್ತಾ ಕುಳಿತಿದ್ದರೆ, ಇನ್ನೊಂದೆಡೆ ಪುಟ್ಟ ಹೆಣ್ಣುಮಗುವಿಗೆ ತಾನು ತಂದೆಯನ್ನು ಕಳೆದುಕೊಂಡ ಅರಿವಿಲ್ಲದೆ ಪಕ್ಕದ ಮನೆ ಮಗುವಿನ ಜೊತೆ ಆಟವಾಡುತ್ತಿತ್ತಂತೆ!