ನವದೆಹಲಿ:ತನ್ನ ಹೇಳಿಕೆ ಹಾಗೂ ನಿರ್ಧಾರಗಳಿಂದ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಕೆಲ ತಿಂಗಳ ಹಿಂದಿನ ವಿಡಿಯೋ ಒಂದನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಶೇರ್ ಮಾಡಿದ್ದು, ಈಗ ಅದು ವೈರಲ್ ಆಗಿದೆ.
ಈ ವರ್ಷದ ಆರಂಭದಲ್ಲಿ ಟೆಹ್ರಾನ್ಗೆ ಭೇಟಿ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಜಪಾನ್ ಹಾಗೂ ಜರ್ಮನಿ ಹಾಗೂ ಗಡಿಯನ್ನು ಹಂಚಿಕೊಂಡಿವೆ ಎಂದು ಹೇಳಿದ್ದರು. ಅದೇ ವಿಡಿಯೋ ಇದೀಗ ಆನಂದ್ ಮಹೀಂದ್ರರ ಮೂಲಕ ವೈರಲ್ ಆಗಿದೆ.
"ವಾಣಿಜ್ಯ ವ್ಯವಹಾರ ಹೆಚ್ಚಾದಷ್ಟು ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಹಾಗೂ ಜರ್ಮನಿಯಲ್ಲಿ ಲಕ್ಷಾಂತರ ನಾಗರಿಕರು ಸಾವನ್ನಪ್ಪಿದರು. ಆ ನಂತರದಲ್ಲಿ ಈ ಎರಡೂ ದೇಶಗಳು ಒಮ್ಮತದಿಂದ ಗಡಿಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾದವು. ಹೀಗಾಗಿ ಆ ದೇಶಗಳ ಗಡಿಯಲ್ಲಿ ಯಾವುದೇ ಕೆಟ್ಟ ಸಂಬಂಧವಿಲ್ಲ ಮತ್ತು ಆರ್ಥಿಕ ಆಸಕ್ತಿಗಳು ಗಟ್ಟಿಯಾಗಿವೆ" ಎಂದು ಇಮ್ರಾನ್ ಖಾನ್ ಹೇಳಿದ್ದರು.
ಜಪಾನ್ ಫೆಸಿಫಿಕ್ ಸಾಗರದ ದ್ವೀಪರಾಷ್ಟ್ರವಾಗಿದ್ದು, ಜರ್ಮನಿ ಯುರೋಪ್ ಖಂಡದ ದೇಶವಾಗಿದೆ. ಆದರೆ, ಈ ಎರಡೂ ದೇಶಗಳು ಗಡಿಹಂಚಿಕೊಂಡಿವೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಇಮ್ರಾನ್ ಖಾನ್ ಎಡವಟ್ಟು ಹೇಳಿಕೆ ನೀಡಿದ್ದರು.
ಸದ್ಯ ತಿಂಗಳು ಹಳೆಯದಾದ ವಿಡಿಯೋವನ್ನು ಶೇರ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರ, ಈ ಸಭ್ಯ ವ್ಯಕ್ತಿ ಇತಿಹಾಸ ಅಥವಾ ಭೂಗೋಳ ಶಾಸ್ತ್ರದ ಶಿಕ್ಷಕರಾಗದಿರುವುದಕ್ಕೆ ದೇವರಿಗೆ ಧನ್ಯವಾದ ಎಂದು ಟ್ವೀಟ್ನಲ್ಲಿ ಬರದುಕೊಂಡಿದ್ದಾರೆ.