ನವದೆಹಲಿ:ಸಾರ್ವತ್ರಿಕ ಚುನಾವಣೆ ಅಂತಿಮ ಹಂತ ತಲುಪುವ ವೇಳೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕುರಿತು ವರಿಷ್ಠ ರಾಜಕಾರಣಿಗಳಿಂದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಉದ್ಯಮಿ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಪ್ರಸ್ತುತ ಸನ್ನಿವೇಶವನ್ನು ನಾಜೂಕಾಗಿ ವಿವರಿಸಿ ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ನಟ/ ರಾಜಕಾರಣಿ ಕಮಲ್ ಹಾಸನ್ ಅವರು ಈಚೆಗೆ,' ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ, ಗಾಂಧಿ ಹತ್ಯೆಯ ಹಂತಕ ನಾಥೂರಾಮ್ ಗೋಡ್ಸೆ' ಎಂದು ಟೀಕಿಸಿದ್ದರು. ಪ್ರತಿಯಾಗಿ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರು 'ಗೋಡ್ಸೆ ಒಬ್ಬ ದೇಶಭಕ್ತ' ಎಂದು ಬಣ್ಣಿಸಿ ವಿವಾದಕ್ಕೀಡಾಗಿದ್ದರು.
''75 ವರ್ಷಗಳ ತನಕ ಭಾರತವು ಮಹಾತ್ಮ ಅವರ ಭೂಮಿಯಾಗಿದೆ. ಇಡೀ ಪ್ರಪಂಚ ತನ್ನ ನೈತಿಕತೆಯನ್ನು ಕಳೆಕೊಂಡಾಗ ಅವರು ಭರವಸೆಯ ಬೆಳಕಾಗಿ ಮೂಡಿದ್ದರು. ಬಡವರಾಗಿದ್ದಕ್ಕೆ ನಮ್ಮ ಬಗ್ಗೆ ಕನಿಕರ ಪಡಲಾಗುತ್ತಿತ್ತು. ಆದರೆ, ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಸ್ಫೂರ್ತಿಯಾದ ಬಾಪು ಅವರು ಇದ್ದಿದ್ದರಿಂದ ನಾವು ಶ್ರೀಮಂತರಾಗಿದ್ದೇವೆ. ಕೆಲ ವಿಚಾರಗಳು ಯಾವಾಗಲೂ ಪವಿತ್ರವಾಗಿರಬೇಕು. ಇಲ್ಲದೇ ಹೋದರೆ ನಮ್ಮನ್ನು ರಕ್ಷಿಸುತ್ತಿದ್ದ ಪ್ರತಿಮೆಗಳನ್ನು ನಾಶಗೊಳಿಸತ್ತಾ... ನಾವು ತಾಲಿಬಾನ್ ಆಗಿ ಬಿಡುತ್ತೇವೆ'' ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.