ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಡಿ ಜೈಲಿನಲ್ಲಿರುವ ಪೆರಾರಿವಾಲನ್ ಕುರಿತು ಅವರ ತಾಯಿ ಟ್ವೀಟ್ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಡಿ ಪೆರಾರಿವಾಲನ್ ಸುಮಾರು 29 ವರ್ಷಗಳಿಂದ ಜೈಲುವಾಸಿಯಾಗಿದ್ದಾರೆ. ಪೆರಾರಿವಾಲನ್ ಅವರ ತಾಯಿ ಅರ್ಪುಥಮಲ್ ತನ್ನ ಮಗನನ್ನು ಬಿಡುಗಡೆ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಸದ್ಯ ಅವರು ತನ್ನ ಮಗನಿಲ್ಲದೇ ಇಷ್ಟು ವರ್ಷಗಳನ್ನು ಹೇಗೆ ಕಳೆದಿದ್ದಾರೆಂದು ಟ್ವೀಟ್ ಮೂಲಕ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.
ಟ್ವೀಟ್ ಮಾಡಿರುವ ಅರ್ಪುಥಮಾಲ್, ಅಂದು ನನ್ನ ಮಗನನ್ನು ವಿಚಾರಣೆಯ ನಂತರ ಮರುದಿನ ಬೆಳಗ್ಗೆ ಮನೆಗೆ ಬಿಟ್ಟು ಹೋಗುವುದಾಗಿ ಹೇಳುವ ಮೂಲಕ ಪೊಲೀಸರ ಬಳಿಗೆ ಕರೆದೊಯ್ಯಲಾಗಿತ್ತು. ಆತನನ್ನು ಪೊಲೀಸರು ಕರೆದೊಯ್ದು 29 ವರ್ಷಗಳಾದವು. ಆ ಬೆಳಗ್ಗೆ ಅದ್ಯಾವಾಗ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಮನನೊಂದು ಹೇಳಿದ್ದಾರೆ.
ಅಲ್ಲದೇ, ನನ್ನ ಮಗ ನಿರ್ದೋಷಿ, ಈ ಹತ್ಯೆ ಘಟನೆಯಿಂದ ಅವನ ಜೀವನವನ್ನು ತಮಾಷೆಯಾಗಿ ಮಾಡಿಬಿಟ್ಟರು. 29 ವರ್ಷಗಳಿಂದ ಆತ ಜೈಲಿನಲ್ಲಿ ಕಷ್ಟ ಪಡುತ್ತಿದ್ದರೆ, ಇಲ್ಲಿ ನಾನು ನಿತ್ಯ ಕಷ್ಟ ಪಡುತ್ತಿದ್ದೇನೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡುವ ಬಗ್ಗೆ ತಮಿಳುನಾಡು ಸರ್ಕಾರ ತಿಳಿಸಿ 10 ತಿಂಗಳೇ ಕಳೆದಿವೆ. ಈಗ ನಾವು ಭರವಸೆಯನ್ನು ಕಳೆದುಕೊಂಡಿದ್ದೇವೆ ಎಂದು ಅರ್ಪುಥಮಾಲ್ ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.