ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಇಂದು ವಿಶ್ವ ಭೂ ದಿನ, ಈ ಆಚರಣೆ ಹುಟ್ಟುಹಾಕಿದಾತ ಈಗ ಖುಷಿ ಪಡುತ್ತಿರುಬಹುದು - ವಿಶ್ವ ಭೂ ದಿನ

ನಮಗೆ ನಮ್ಮ ವಿಶ್ವವನ್ನು ಮತ್ತು ಭಾರತವನ್ನು ಮರುರೂಪಿಸಲು ಸುಸ್ಥಿರವಾದ ಹಸಿರು ಆರ್ಥಿಕತೆ ಅಗತ್ಯವಿದೆ. ಇದು ಮಾಲಿನ್ಯವಿಲ್ಲದ, ವೃತ್ತಾಕಾರದ, ನವೀಕರಿಸಬಹುದಾದ ಅಂಶಗಳನ್ನು ಆಧರಿಸಿದ್ದಾಗಿರಬೇಕು. ಕಳೆದ ಶತಮಾನದ ಬಹುತೇಕ ಸಂದರ್ಭಗಳಲ್ಲಿ, ಭೂಮಿಯನ್ನು ನಾಶ ಮಾಡುವುದಕ್ಕೆಂದೇ ತಂತ್ರಜ್ಞಾನವನ್ನು ಬಳಸಲಾಗಿದೆ.

Earth Day
ವಿಶ್ವ ಭೂ ದಿನ

By

Published : Apr 22, 2020, 9:54 AM IST

ನವದೆಹಲಿ: ಲಾಕ್‌ಡೌನ್‌ ಮಧ್ಯೆಯೇ 2020 ಏಪ್ರಿಲ್ 22 ರಂದು ನವದೆಹಲಿಯಲ್ಲಿ ಒಂದು ಐತಿಹಾಸಿಕ ದಿನವನ್ನು ಆಚರಿಸಲಾಗಿದೆ. ಬಹುಶಃ ಇದನ್ನು ಜಗತ್ತಿನೆಲ್ಲೆಡೆಯಲ್ಲೂ ಆಚರಿಸಲಾಗಿದೆ. 1970 ರಿಂದಲೂ ಇದನ್ನು ಆಚರಿಸಲಾಗುತ್ತಿದೆ. ಇದು ಭೂ ದಿನ! ಈ ಭೂ ದಿನ ಆಚರಣೆಯನ್ನು ಹುಟ್ಟುಹಾಕಿದ್ದ ಜಾನ್ ಮೆಕಾನೆಲ್‌. ಈಗ ಅವರು ಸ್ವರ್ಗದಲ್ಲಿ ನಮ್ಮನ್ನು ನೋಡಿ ನಗುತ್ತಿರಬಹುದು. ಯಾಕೆಂದರೆ, ಈಗ ಲಾಕ್‌ಡೌನ್‌ನಿಂದಾಗಿ ವಿಷಯುಕ್ತ ಮೋಡಗಳಿಲ್ಲ ಮತ್ತು ವಿಷಾನಿಲವೂ ಕಡಿಮೆಯಾಗಿದೆ. ಆಮ್ಲಜನಕದ ಪ್ರಮಾಣ ಹೆಚ್ಚಿರುವುದರಿಂದ ಅವರಿಗೆ ಖುಷಿಯೂ ಆಗಿರಬಹುದು.

ಈ ತಾತ್ಕಾಲಿಕ ಸನ್ನಿವೇಶವನ್ನು ಹೊರತುಪಡಿಸಿ, ನಾವು ನಮ್ಮ ಗ್ರಹವನ್ನು ರಕ್ಷಿಸಿಕೊಳ್ಳಬಹುದೇ? ವಾಯು ಮತ್ತು ನೀರು ಶುದ್ಧವಾಗಿಟ್ಟುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದರೆ, ಆರ್ಥಿಕತೆ ಏರಿಕೆಯಾಗುತ್ತಲೇ ಇರುತ್ತದೆಯೇ? ನಾವು ನಮ್ಮನ್ನು ಆತ್ಮವಿಮರ್ಶೆ ಮಾಡಿಕೊಂಡರೆ, ನಿಸರ್ಗದ ವಿಜಯದಿಂದ ನಮ್ಮ ಇಡೀ ಭೂಮಂಡಲವನ್ನು ಮುಳುಗಿಸುವ ಹಂತದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಪರಿಸರ ಮಾಲಿನ್ಯವು ಈ ಮನುಕುಲಕ್ಕೆ ಅತ್ಯಂತ ದೊಡ್ಡ ಅಪಾಯವಾಗಿದೆ. ಇದು ಅಣ್ವಸ್ತ್ರ ಯುದ್ಧಕ್ಕಿಂತ ಸ್ವಲ್ಪ ಕೆಳಮಟ್ಟದ್ದಷ್ಟೇ. ಇದು ತೀವ್ರವಾದ ಭೌಗೋಳಿಕ ಪರಿಣಾಮವನ್ನು ಹೊಂದಿದೆ. ನೋಮ್ ಚೋಮ್‌ಸ್ಕೀ ಇತ್ತೀಚೆಗೆ ಡೆಮಾಕ್ರಸಿ ನೌ ಎಂಬುದರಲ್ಲಿ ಹೇಳಿರುವಂತೆ ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರ ಯುದ್ಧ ನಡೆಸಿದರೆ ಜಲ ಮೂಲಗಳು ಕುಸಿಯುತ್ತವೆ. ಒಟ್ಟಾರೆಯಾಗಿ, ಇಡೀ ಭೂಮಂಡಲವು ತನ್ನ ಮೇಲೆ ನಡೆಸುವ ಹಿಂಸೆಯನ್ನು ಇನ್ನು ಸಹಿಸುವುದಿಲ್ಲ. ಸಾಂಕ್ರಾಮಿಕ ರೋಗಗಳು ನಿಸರ್ಗದ ಸರಿಪಡಿಸುವಿಕೆ ಕ್ರಿಯೆಯಾಗಿದೆ. ಇದೆ ಕಾರಣಕ್ಕೆ ಪಾರಿಸರಿಕವಾಗಿ ನಾಶಯುಕ್ತ ವಿನ್ಯಾಸವಾಗಿದೆ ಮತ್ತು ಹೊಸ ಆರ್ಥಿಕತೆ ಮತ್ತು ಹೊಸ ವಿಶ್ವದ ಮರುಸೃಷ್ಟಿಗೆ ಇದು ಮಹತ್ವದ್ದಾಗಿದೆ.

ನಾವು ಹೊಸ ಜಗತ್ತನ್ನು ಸೃಷ್ಟಿಸುವುದು ಹೇಗೆ? ನಮ್ಮ ಐಹಿಕ ಜಗತ್ತನ್ನು ತ್ಯಜಿಸಿ, ನಮ್ಮ ಜವಾಬ್ದಾರಿಗಳನ್ನೆಲ್ಲ ಮತ್ತೆ ಗಳಿಸಿಕೊಳ್ಳುವುದೇ? ತಂತ್ರಜ್ಞಾನವೇ ಇಲ್ಲದ ಜೀವನ ನಡೆಸುವುದು ಮತ್ತು ಅರಣ್ಯದಲ್ಲೇ ವಾಸಿಸುವುದೇ? ಹಾಗೇನಿಲ್ಲ. ಕೊರೊನಾವೈರಸ್‌ ಎಂಬುದು ಇಡೀ ಜಗತ್ತಿಗೇ ಕಾರಕವಾಗಿದ್ದರೂ, ನಾವು ನಮ್ಮ ವಿವೇಚನೆಯನ್ನು ಇಟ್ಟುಕೊಂಡೇ ಸಂಪನ್ಮೂಲಗಳನ್ನು ಬಳಸಬೇಕಿದೆ. ಆರೋಗ್ಯಕರವಾದ ಗಾಳಿ, ಶುದ್ಧವಾದ ನೀರು ಮತ್ತು ನಮ್ಮ ನಗರಗಳಲ್ಲಿ ಮತ್ತೆ ಹಕ್ಕಿಗಳ ಚಿಲಿಪಿಲಿಯನ್ನು ನಾವು ಮರುಸೃಷ್ಟಿಸಬೇಕಿದೆ. ಹವಾಮಾನ ಬದಲಾವಣೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಮತ್ತು ಉಳಿಯುವುದಕ್ಕಾಗಿ, ನಾವು ಐದು ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ಮಾಡುವುದು, ಮರುಬಳಕೆ ಮಾಡುವುದು, ಪುನಶ್ಚೇತನ, ಸ್ವದೇಶಿ ಮತ್ತು ಕೃಷಿ ಪರಿಸರ. ಇದು ನಮಗೆ ನಮ್ಮ ಜೀವನವನ್ನು ಮತ್ತು ಆರ್ಥಿಕತೆಯನ್ನು ಪುನಃ ಒದಗಿಸುತ್ತದೆ.

ನಮಗೆ ನಮ್ಮ ವಿಶ್ವವನ್ನು ಮತ್ತು ಭಾರತವನ್ನು ಮರುರೂಪಿಸಲು ಸುಸ್ಥಿರವಾದ ಹಸಿರು ಆರ್ಥಿಕತೆ ಅಗತ್ಯವಿದೆ. ಇದು ಮಾಲಿನ್ಯವಿಲ್ಲದ, ವೃತ್ತಾಕಾರದ, ನವೀಕರಿಸಬಹುದಾದ ಅಂಶಗಳನ್ನು ಆಧರಿಸಿದ್ದಾಗಿರಬೇಕು. ಕಳೆದ ಶತಮಾನದ ಬಹುತೇಕ ಸಂದರ್ಭಗಳಲ್ಲಿ, ಭೂಮಿಯನ್ನು ನಾಶ ಮಾಡುವುದಕ್ಕೆಂದೇ ತಂತ್ರಜ್ಞಾನವನ್ನು ಬಳಸಲಾಗಿದೆ. ಈಗ ನಾವು ಇವೆರಡಕ್ಕೂ ಒಂದು ಸೇತುವೆ ಕಟ್ಟಬೇಕಿದೆ. ಔದ್ಯಮಿ ಕ್ರಾಂತಿ 4.0 ಅನ್ನು ಜಾರಿಗೊಳಿಸಬೇಕಿದೆ. ಇದು ಮಾಲಿನ್ಯವಿಲ್ಲದ, ವೃತ್ತಾಕಾರದ ಮತ್ತು ನವೀಕರಣ ಮಾಡಬಹುದಾದ ತಂತ್ರಜ್ಞಾನವನ್ನು ನಿರ್ಮಿಸಬೇಕಿದೆ.

ಆದರೆ, ಈ ದಾರಿ ಎಲ್ಲಿಂದ ಶುರುವಾಗತ್ತದೆ? ಭೂಮಿಯ ಬಗ್ಗೆ ನಾವು ಅರಿವನ್ನು ಬೆಳೆಸಿಕೊಳ್ಳುವುದೇ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಭೂಮಿ ಜೀವಂತವಾಗಿದೆ. ಆಕೆಯನ್ನು ನಾವು ಕೊಳೆಯಾಗಿಸಬೇಕಿಲ್ಲ. ನೀರಿಗಾಗಿ ಕೊರೆಯಬೇಕಿಲ್ಲ ಅಥವಾ ಸಂಪತ್ತಿಗಾಗಿ ಪರ್ವತಗಳನ್ನು ಅಗೆಯಬೇಕಿಲ್ಲ. ನಾವು ನಮ್ಮ ಭೂಮಿ, ನಮ್ಮ ಪರ್ವತಗಳು ಮತ್ತು ಮಣ್ಣಿನ ಜೊತೆಗೆ ಸಂಪರ್ಕ ಸಾಧಿಸಬೇಕಿದೆ. ಭೂಮಿಯ ಹೃದಯ ಬಡಿಯುವ ಧ್ವನಿಯನ್ನು ನಾವು ಕೇಳಿಸಿಕೊಳ್ಳಬೇಕು. ಭೂಮಿ ಜೀವಿಸುತ್ತಿದೆ ಮತ್ತು ಆಕೆಯ ಉಡುಗೊರೆಯೇ ನಮ್ಮ ಜೀವನ. ಆಕೆಯನ್ನು ನಾವು ಗೌರವಿಸಬೇಕು.

ಈ ಪ್ರಜ್ಞೆ ನಮ್ಮಲ್ಲಿ ಮೂಡಿದಾಗ ಮುಂದಿನ ಹಂತದಲ್ಲಿ ನಾವು ನಮ್ಮ ಹೆಜ್ಜೆ ಗುರುತುಗಳನ್ನು ಈ ಭೂಮಿಯ ಮೇಲೆ ಕಡಿಮೆ ಮಾಡಲು ಆರಂಭಿಸಬೇಕು. ನಾವು ಮಾಡುವ ಪ್ರತಿ ಕ್ರಮವೂ ಮತ್ತು ನಾವು ಬಳಸುವ ಪ್ರತಿ ಉತ್ಪನ್ನವೂ ಈ ಭೂಮಿಯ ಮೇಲೆ ಒಂದು ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ, ನಾವು ಕಾಣುವ ಕನಸುಗಳೆಲ್ಲ ಅಂದರೆ, ದೊಡ್ಡ ಮನೆಗಳು, ಹಲವು ಐಷಾರಾಮಿ ಕಾರುಗಳು ಇತ್ಯಾದಿಯೆಲ್ಲವೂ ಪರಿಸರಕ್ಕೆ ಮಾರಕವಾಗಿದೆ. ನೀರು, ಪಳೆಯುಳಿಕೆ ಇಂಧನ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ ಸ್ಮಾರ್ಟ್ ವಿಧಾನವಲ್ಲ. ಇದು ಆರ್ಥಿಕವಾಗಿಯೂ ಉತ್ತಮವಾಗಿದೆ. ನಾವು ಬಳಕೆ ಮಾಡುವ ಹುಚ್ಚನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಮತ್ತು ಪಳೆಯುಳಿಕೆ ಇಂಧನದ ಬದಲಿಗೆ ಪರ್ಯಾಯ ಇಂಧನಗಳನ್ನು ಬಳಸಬೇಕಿದೆ.

ಭೂಮಿಯಲ್ಲಿ ಸಂಪನ್ಮೂಲಗಳು ಮಿತವಾಗಿವೆ. ನಾವು ವಿಪರೀತವಾಗಿ ಬಳಸಿದರೆ ಭವಿಷ್ಯದ ತಲೆಮಾರಿನ ಪಾಲನ್ನು ನಾವು ನಾಶ ಮಾಡುತ್ತಿರುತ್ತೇವೆ. ಇತರ ಮನುಷ್ಯರು ಮತ್ತು ಗ್ರಹಕ್ಕೆ ಮಾರಕವಾಗುವ ಉತ್ಪನ್ನಗಳನ್ನು ಖರೀದಿಸುವುದನ್ನು ಕಡಿಮೆ ಮಾಡಬೇಕು ಅಥವಾ ನಿಲ್ಲಿಸಬೇಕು. ನೆನಪಿಡಿ, ಪ್ರತಿ ಬಾರಿ ನೀವು ಖರೀದಿ ಮಾಡುವಾಗಲೂ ಹತ್ತು ಬಾರಿ ಯೋಚಿಸಿ. ಇದು ನನಗೆ ಅಗತ್ಯವೇ ಎಂದು ಕೇಳಿಕೊಳ್ಳಿ. ಇದು ನನಗೆ ಮತ್ತು ಭೂಮಿಗೆ ಅಪಾಯವನ್ನು ಉಂಟು ಮಾಡುತ್ತದೆಯೇ ಎಂದು ಕೇಳಿಕೊಳ್ಳಿ. ಬಳಕೆಯನ್ನು ಕಡಿಮೆ ಮಾಡುವ ಅತ್ಯಂತ ಸರಳ ವಿಧಾನವೆಂದರೆ ಸಾಮಗ್ರಿಗಳನ್ನು ಮರುಬಳಕೆ ಮಾಡುವುದಾಗಿದೆ. ಆರ್‌ಒ ವಾಟರ್‌ ಯೂನಿಟ್‌ನಿಂದ ಹೊರ ಹರಿಯುವ ಲೀಟರುಗಟ್ಟಲೆ ನೀರನ್ನು ನಾವು ಗಿಡಕ್ಕೆ ಉಣಿಸುವುದು ಅತವಾ ಪಾತ್ರೆ ತೊಳೆಯಲು ಬಳಸುವುದು ಅಥವಾ ಹಳೆಯ ಬಟ್ಟೆಗಳನ್ನು ಕೌದಿಯ ರೀತಿ ಬಳುಸುವುದು ಇದಕ್ಕೆ ಉತ್ತಮ ಉದಾಹರಣೆಯಾದೀತು.

ಮರುಬಳಕೆಯ ವಿಚಾರದಲ್ಲಿ ಭಾರತದಲ್ಲಿ ಹಲವು ಐಡಿಯಾಗಳಿವೆ. ವೈಯಕ್ತಿಕವಾಗಿ ಹೇಳುವುದಾದರೆ, ನಾವು ಕಸವನ್ನು ವಿಂಗಡಿಸುತ್ತೇವೆ ಮತ್ತು ಹಲವು ತಿಂಗಳುಗಳಿಂದ ನಾವು ಕಸವನ್ನು ಅಡುಗೆ ಮನೆಯಿಂದ ಎಸೆದೇ ಇಲ್ಲ. ಬದಲಿಗೆ ನಾವು ಈ ಕಸವನ್ನು ಗೊಬ್ಬರ ಮಾಡುತ್ತೇವೆ ಅಥವಾ ಬೀದಿ ಬದಿಯ ದನಗಳಿಗೆ ತಿನ್ನಿಸುತ್ತೇವೆ. ಮೂತ್ರವನ್ನೂ ಕೂಡ ನಾವು ಗೊಬ್ಬರವನ್ನಾಗಿ ಬಳಸಬಹುದು. ಇದರಲ್ಲಿ ಯೂರಿಯಾ ಮತ್ತು ಪಾಸ್ಫೇಟ್ ಇರುತ್ತದೆ. ನಗರದ ಉದ್ಯಾನಗಳಿಗೆ ಇದು ಉತ್ತಮವಾಗಿದೆ. ಸಾಧ್ಯವಾದಷ್ಟೂ ಕಡಿಮೆ ತ್ಯಾಜ್ಯವನ್ನು ಸೃಷ್ಟಿಸಿ. ಏನ್ನಾದರೂ ಎಸೆಯುವ ಮೊದಲು, ಒಂದು ನಿಮಿಷ ನಿಂತು ಯೊಚಿಸಿ. ಇದನ್ನು ಇನ್ನೊಂದು ವಿಧಾನದಲ್ಲಿ ನಾವು ಹೇಗೆ ಬಳಸಬಹುದು ಎಂದು ನೋಡಿ.

ಎರಡು ಋಣಾತ್ಮಕ ಬಳಕೆ ವಿಧಾನಗಳನ್ನು ಕೈಬಿಟ್ಟರೆ ಖಂಡಿತವಾಗಿಯೂ ಪರಿಸರದ ಮೇಲೆ ಒಂದು ದೊಡ್ಡ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಮನುಷ್ಯರು ಈ ಜಗತ್ತಿನಲ್ಲಿ ಅತ್ಯಂತ ಪರಿಣಿತರಲ್ಲ. ಆದರೆ, ಅಮೆರಿಕದ ಅತ್ಯಂತ ಜನಪ್ರಿಯ ಪರಿಸರ ತಜ್ಞ ಅಲ್ಡೋ ಲಿಯೋಪೋಲ್ಡ್ ಹೇಳುವಂತೆ ನಾವು ಕೇವಲ ಈ ಭೂಮಿಯ ಕಾವಲುಗಾರರು. ನಮ್ಮ ಪೂರ್ವಜರಿಂದ ನಾವು ಈ ಭೂಮಿಯನ್ನು ಕೇವಲ ಕಡ ತೆಗೆದುಕೊಂಡಿದ್ದೇವೆ. ಮನೆಯಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಬಳಸುತ್ತಾ ಹೊರಗೆ ಬಂದು ಭೂಮಿ ಸೂರೆ ಹೊಡೆಯುವ ಹಕ್ಕು ನಮಗೆ ಇಲ್ಲ. ಕೇವಲ ಗಾಳಿ, ನೀರು, ಮಣ್ಣನ್ನು ನಾವು ಹಾಳು ಮಾಡುವ ಹಕ್ಕಿಲ್ಲ. ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದೊಂದೇ ಪರಿಹಾರವಲ್ಲ.

ಪುನಶ್ಚೇತನದ ನಿಟ್ಟಿನಲ್ಲಿ ನಾವು ಧನಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕೇವಲ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುವ ಕ್ರಮಗಳ ಮೇಲೆ ಮಾತ್ರ ಗಮನ ಹರಿಸಿದರೆ ಸಾಲದು. ಪಳೆಯುಳಿಕೆ ಇಂಧನದ ಬದಲಿಗೆ ಜೈವಿಕ ಇಂದನವನ್ನು ಬಳಸುವುದು ಮಾತ್ರ ನಮ್ಮ ಆದ್ಯತೆಯಾಗಿರಬಾರದು. ಬಯೋಮಿಮಿಕ್ರೊ, ಬಯೋ ಫಿಲಿಕ್ ವಿನ್ಯಾಸ, ಪಾರಿಸರಿಕೆ ಮತ್ತು ಆವೃತ್ತ ಆರ್ಥಿಕತೆಗಳ ಮುನ್ನೋಟವನ್ನು ನಾವು ಮಾಡಬೇಕಿದೆ. ವ್ಯಕ್ತಿಯಾಗಿ ನನ್ನ ಯಾವುದೇ ಕ್ರಮವು ಪ್ರತ್ಯೇಕವಾಗಿರುವುದಿಲ್ಲ. ಇದು ಇಡೀ ಜಗತ್ತನ್ನು ಪ್ರತಿನಿಧಿಸುತ್ತದೆ. ನಮ್ಮ ಬ್ರಹ್ಮಾಂಡಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಮ್ಮ ನಡೆ ಇರಬೇಕು.

ನೂರು ವರ್ಷಗಳ ಹಿಂದೆಯೇ ಇದಕ್ಕೆ ಪರಿಹಾರವನ್ನು ನಮಗೆ ನೀಡಿದ್ದರು, ಇದನ್ನು ಅವರು ಸ್ವದೇಶಿ ಆರ್ಥಿಕತೆ ಎಂದು ಕರೆದಿದ್ದರು. ಇದಕ್ಕೆ ಸ್ವಯಂ ಅವಲಂಬನೆ, ಗೌರವ ಮತ್ತು ಸ್ಥಳೀಯ ಸಹಕಾರವೇ ಆಧಾರ ಸ್ಥಂಭವಾಗಿತ್ತು. ಇದು ಪರಿಸರದ ಮೇಲೆ ಅತ್ಯಂತ ಕಡಿಮೆ ಮತ್ತು ಧನಾತ್ಮಕ ಪರಿಣಾಮವನ್ನೂ ಹೊಂದಿತ್ತು. ಪ್ರತಿ ಗ್ರಾಮವೂ ಸ್ವಯಂ ಅವಲಂಬನೆ ಹೊಂದುವ ಮಾದರಿಗಳನ್ನು ಅವರು ಊಹಿಸಿದ್ದರು ಮತ್ತು ಈ ಬಗ್ಗೆ ವಿಸ್ತೃತವಾಗಿ ಬರೆದಿದ್ದರು. ಅಗತ್ಯವಿದ್ದರೆ ಈ ಪ್ರತಿಯೊಂದು ಗ್ರಾಮವೂ ಇಡೀ ಜಗತ್ತಿನಿಂದ ತನ್ನನ್ನು ಸಮರ್ಥಿಸಿಕೊಳ್ಳಬೇಕು ಎಂದೂ ಅವರು ವಿವರಿಸಿದ್ದರು.

ಈ ಆರ್ಥಿಕತೆಯು, ಉತ್ಪಾದನೆಯ ವಿಕೇಂದ್ರೀಕೃತ ವ್ಯವಸ್ಥೆಯಾಗಿತ್ತು. ಹೆಚ್ಚು ಇರುವುದನ್ನು ಹಂಚಿಕೊಂಡು, ತಾನು ಉತ್ಪಾದಿಸಲಾಗದ್ದನ್ನು ಇತರರಿಂದ ಪಡೆಯುವ ವಿಶಿಷ್ಟ ವ್ಯವಸ್ಥೆಯನ್ನು ಇದು ಒಳಗೊಂಡಿತ್ತು. ಭಾರತದಲ್ಲಿ ಸ್ವದೇಶಿ 2.0 ಅನ್ನು ಅಳವಡಿಸಿಕೊಳ್ಳುವ ಸಮಯ ಈಗ ಬಂದಿದೆ.ಇದಕ್ಕೆ ಪಾರಿಸರಿಕ ತಂತ್ರಜ್ಞಾನಗಳ ನೆರವೂ ಇರಬೇಕು. ಇದು ಋಣಾತ್ಮಕ ಪ್ರಗತಿಯಾಗಿರಬೇಕಿಲ್ಲ. ಇದರಲ್ಲಿ ದ್ವೇಷ ಅಥವಾ ನಿರ್ಬಂಧ ಇರಬಾರದು. ಬದಲಿಗೆ, ಸ್ವಯಂ ಅವಲಂಬನೆಯ ಬಗ್ಗೆ ಧನಾತ್ಮಕ ಪ್ರಯತ್ನ ಇರಬೇಕು. ಒಂದು ಕುಟುಂಬ ಮತ್ತು ಒಂದು ದೇಶವಾಗಿ, ನಾವೇ ಎಲ್ಲವನ್ನೂ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ. ಔಷಧದಿಂದ ಆಹಾರದವರೆಗೂ ನಮ್ಮ ಸಮೀಪದಲ್ಲೇ ಉತ್ಪಾದನೆಯಾಗಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ನಿರ್ಧಾರಗಳ ಮೇಲೆ ಅಧಿಕಾರ ಹೊಂದಿರಬೇಕು. ಅಂದರೆ, ಸಾಧ್ಯವಾದಷ್ಟೂ ನಾವು ಸ್ಥಳೀಯ ಮತ್ತು ಸುಸ್ಥಿರ ಉತ್ಪನ್ನಗಳನ್ನೇ ಬಳಸಬೇಕು. ಸ್ವದೇಶಿ ಉತ್ಪನ್ನ ಮತ್ತು ಸುಸ್ಥಿರತೆಯಲ್ಲಿ ನಮ್ಮ ಶ್ರಮವನ್ನು ವೆಚ್ಚ ಮಾಡಬೇಕು. ಏನನ್ನಾದರೂ ಖರೀದಿಸುವುದಕ್ಕೂ ಮೊದಲು ಇದನ್ನು ನಮ್ಮ ಸಮೀಪದಲ್ಲೇ ಇರುವ ವಸ್ತುವಿನಲ್ಲೇ ಸರಿದೂಗಿಸಬಹುದೇ ಎಂದು ಯೋಚಿಸಿ.

ಈ ಸಿದ್ಧಾಂತದ ಕೊನೆಯ ಸ್ಥಂಭವಾಗಿರುವುದು ಕೃಷಿ ಪರಿಸರ. ಜಾನುವಾರು ಮತ್ತು ಕೋಳಿ ಸಾಕಾಣಿಕೆ ಫಾರಂಗಳು ಸೇರಿದಂತೆ ಆಹಾರ ವ್ಯವಸ್ಥೆಯ ಔದ್ಯಮೀಕರಣದಿಂದ ಮನುಷ್ಯನ ಆರೋಗ್ಯ ಹಾಳಾಗಿದೆ. ಅಷ್ಟೇ ಅಲ್ಲ, ಇದು ಭೂಮಿಯನ್ನೂ ಹಾಳು ಮಾಡಿದೆ. ರೈತರ ಆತ್ಮಹತ್ಯೆ, ಕ್ಯಾನ್ಸರ್, ಸಣ್ಣ ರೈತರು ದಿವಾಳಿಯಾಗುವುದು, ಗ್ರಾಮೀಣ ಸಮುದಾಯದಲ್ಲಿ ದೌರ್ಜನ್ಯ ಮತ್ತು ಅಪರಾಧವೇ ತುಂಬಿ ಹೋಗಿದೆ. ಇದು ನಮ್ಮ ಉತ್ಪಾದನೆ ವ್ಯವಸ್ಥೆ ಕುಸಿದಿರುವ ಸೂಚನೆಯಾಗಿದೆ. ನಮ್ಮ ನದಿಗಳು ರಸಗೊಬ್ಬರ ಮತ್ತು ಕೀಟನಾಶಕದಿಮದ ಹಾಳಾಗಿದೆ. ಆಹಾರವನ್ನು ಸೇವಿಸುವ ಕುಟುಂಬಗಳು ಡಯಾಬಿಟೀಸ್‌ನಿಂದ ಕ್ಯಾನ್ಸರ್‌ನಂತಹ ಹಲವು ರೋಗಗಳಿಗೆ ತುತ್ತಾಗಿದೆ. ಇನ್ನೊಂದೆಡೆ ರಸಗೊಬ್ಬರಗಳ ಮೇಲೆ ನೀಡಲಾಗುತ್ತಿರುವ ರಸಗೊಬ್ಬರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬಾರಿ ಹೊರೆಯಾಗುತ್ತಿದೆ.

ಸಿಐಎಂಎಂವೈಟಿ ಪ್ರಧಾನ ವಿಜ್ಞಾನಿ ಎಂಎಲ್‌ ಜಾಟ್‌ ಇತ್ತೀಚಿನ ಅಧ್ಯಯನ ವರದಿಯಲ್ಲಿ ಹೇಳುವಂತೆ ಕೃಷಿ-ಪರಿಸರವು ಉತ್ತಮ ವಿಧಾನವಾಗಿದೆ. ಅಗ್ರೋ ಎಕಾಲಜಿ ಅಥವಾ ಕೃಷಿ ಪರಿಸರ ವ್ಯವಸ್ಥೆಯು ನಮಗೆ ಆರೋಗ್ಯಕರ ಆಹಾರ ಒದಗಿಸುತ್ತದೆ. ಅಷ್ಟೇ ಅಲ್ಲ, ಈ ಪ್ರಯೋಗವು ರಾಸಾಯನಿಕಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಆಹಾರ ವ್ಯವಸ್ಥೆಯಲ್ಲಿ ಪಳೆಯುಳಿಕೆ ಇಂಧನದ ಬಳಕೆಯನ್ನೂ ಕಡಿಮೆ ಮಾಡುತ್ತದೆ. ನೀರನ್ನು ಶುಚಿಗೊಳಿಸುವುದು, ಕಾರ್ಬನ್ ಅನ್ನು ಕಡಿಮೆ ಮಾಡುವುದು, ನೈಟ್ರೋಜನ್ ಆವರ್ತನವನ್ನು ಸರಿಪಡಿಸುವುದು ಮತ್ತು ರುಚಿಯಾದ ಆಹಾರವನ್ನು ನಮಗೆ ಒದಗಿಸಬಲ್ಲದು.

ಹಾಗಾದರೆ, ನಾವು ಎಲ್ಲಿಂದ ಶುರು ಮಾಡಬೇಕು? ನಿಮ್ಮ ಮನೆಯಲ್ಲೇ ಇದನ್ನು ಶುರು ಮಾಡಿ. ಕುಂಡದಲ್ಲಿ ಕೊತ್ತಂಬರಿ ಸೊಪ್ಪಿನಂತಹ ಸೊಪ್ಪು ಅಥವಾ ತರಕಾರಿಗಳನ್ನು ಉದ್ಯಾನದಲ್ಲಿ ಬೆಳೆಯಿರಿ. ರಾಸಾಯನಿಕಗಳನ್ನು ಬಳಸಬೇಡಿ. ನೀವು ಏನನ್ನು ತಿನ್ನುತ್ತೀರೋ ಅದನ್ನೇ ಬೆಳೆಸಲು ಪ್ರಯತ್ನಿಸಿ. ನಿಮ್ಮಿಂದ ಬೆಳೆಯಲು ಸಾಧ್ಯವಾಗದಿದ್ದರೆ, ಸಾವಯವ ರೂಪದಲ್ಲಿ ಆಹಾರವನ್ನು ಬೆಳೆಯವ ರೈತರನ್ನು ಸಂಪರ್ಕಿಸಿ. ನಗರಗಳಲ್ಲಿ ವಾಸಿಸುತ್ತಿರುವವರಲ್ಲಿ ನಗರದ ಉದ್ಯಾನದ ಬಗ್ಗೆ ಅರಿವು ಮೂಡಿಸಬೇಕು. ಇಲ್ಲಿ ನಾವು ನಮ್ಮ ಆಹಾರವನ್ನು ನಾವೇ ಉತ್ಪಾದಿಸಿಕೊಳ್ಳಬಹುದು ಮತ್ತು ಸಸ್ಯದಿಂದ ಆಹಾರ ಬರುತ್ತದೆ, ಫ್ರಿಜ್‌ನಿಂದ ಬರುವುದಿಲ್ಲ ಎಂದು ನಮ್ಮ ಮಕ್ಕಳಿಗೆ ಈ ಮೂಲಕ ತಿಳಿಸಬಹುದು.

ಈ ಎಲ್ಲ ಸಿದ್ಧಾಂತಗಳ ಸಂಚಯವೇ ಹಸಿರು ಆರ್ಥಿಕತೆಗೆ ಅಡಿಪಾಯವಾಗಿದೆ. ಇದು ನವೀಕರಣ, ಆರ್ಥಿಕ ಸಬಲೀಕರಣ ಮತ್ತು ವೃತ್ತಸಂಚಯವನ್ನು ಆಧರಿಸಿದೆ. ಇಡೀ ಜಗತ್ತು ಆರ್ಥಿಕತೆ ಕುಸಿತದ ಕತ್ತಲಿನಲ್ಲಿರುವಾಗ ಒಡೆದ ಆರ್ಥಿಕತೆ ಮತ್ತು ಉದ್ಯಮ ವ್ಯವಸ್ಥೆಯಲ್ಲಿ ಧೂಳಿನಿಂದ ಮೇಲೆದ್ದು ಬರಬೇಕಿದೆ ಹಾಗೂ ಹೊಸ ಹಸಿರು ಆರ್ಥಿಕತೆಯನ್ನು ನಾವು ಪುರಸ್ಕರಿಸಬೇಕಿದೆ. ಮಹಾತ್ಮ ಗಾಂಧಿ ಮೂಲಕ ಸ್ವದೇಶಿ ಆರ್ಥಿಕತೆ ಎಂಬ ಕಲ್ಪನೆ ನಮ್ಮ ಬಳಿ ಈಗಾಗಲೇ ಇದೆ. ಈ ಭೂ ದಿನದ ಹಿನ್ನೆಲೆಯಲ್ಲಿ ನಾವು ನಮ್ಮ ವಸುಧೈವ ಕುಟುಂಬಕಂ ಕಲ್ಪನೆಯನ್ನು ಮರುರೂಪಿಸಬೇಕಿದೆ ಮತ್ತು ವಿಜ್ಞಾನ, ಸಹಿಷ್ಣುತೆ ಮತ್ತು ಭೂಮಿಯ ಹಾದಿಯಲ್ಲಿ ಸಾಗಬೇಕಿದೆ.

- ಇಂದ್ರ ಶೇಖರ್ ಸಿಂಗ್, (ನಿರ್ದೇಶಕರು, ಪಾಲಿಸಿ ಮತ್ತು ಔಟ್‌ರೀಚ್‌, ಭಾರತೀಯ ರಾಷ್ಟ್ರೀಯ ಬೀಜ ಸಂಘಟನೆ)

ABOUT THE AUTHOR

...view details