ಅಲಿಗರ್ (ಉತ್ತರ ಪ್ರದೇಶ):ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಸಾವು ಸಂಭವಿಸಲು ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಅಲಿಗರ್ ಜಿಲ್ಲಾಡಳಿತ, ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಜವಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ವೈದ್ಯನನ್ನು ಅಮಾನತುಗೊಳಿಸಿದೆ.
ಮೆರಾಜುದ್ದೀನ್ (55) ಮೃತ ರೋಗಿ. ಏ.19 ರಂದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಮೆರಾಜುದ್ದೀನ್ನನ್ನು ಮೊದಲು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿ ಬಳಿಕ ವೆಂಟಿಲೇಟರ್ನಲ್ಲಿರಿಸಲಾಗಿದೆ. ಈ ಕುರಿತು ಮೆಡಿಕಲ್ ಕಾಲೇಜು ಅಧಿಕಾರಿಗಳು ಜಿಲ್ಲಾ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಏ.20 ರಂದು ರೋಗಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿಷಯ ತಿಳಿಸಲು ವಿಳಂಬ ಮಾಡಿದ ಕಾರಣ ರೋಗಿಗೆ ಸಮಯಕ್ಕೆ ಸರಿಯಾದ ಸೂಕ್ತ ಚಿಕಿತ್ಸೆ ದೊರೆತಿಲ್ಲ ಹಾಗೂ ಇತರರಿಗೆ ಸೋಂಕು ಹರಡುವಂತಾಯಿತು ಎಂದು ಅಲಿಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಭೂಷಣ್ ಆರೋಪಿಸಿದ್ದಾರೆ.