ನವದೆಹಲಿ: ಅಂಫಾನ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತ ಇಂದು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಪಶ್ಚಿಮ ಬಂಗಾಳದತ್ತ ಸಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ವಾಯುವ್ಯ ಬಂಗಾಳ ಕೊಲ್ಲಿಯಾದ್ಯಂತ ಉತ್ತರ-ಈಶಾನ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಮುಂದಿನ ಆರು ಗಂಟೆಗಳಲ್ಲಿ ಈ ಅಂಫಾನ್ ತನ್ನ ವೇಗ ಹೆಚ್ಚಿಸಿಕೊಂಡು ತೀವ್ರವಾಗಲಿದೆ. ಮೇ 20ರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಪಶ್ಚಿಮ ಬಂಗಾಳ - ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ಅಪ್ಪಳಿಸಲಿದೆ. ಈ ವೇಳೆ ಚಂಡಮಾರುತ ಗರಿಷ್ಠ 165-175 ಕಿ.ಮೀ. ವೇಗದಿಂದ 195 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದ್ದು, ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ನಾಳೆ ಪಶ್ವಿಮ ಬಂಗಾಳದ ಗಂಗಾ ನದಿ ತೀರದ ಪ್ರದೇಶಗಳಲ್ಲಿ ಭಾರಿ ಮಳೆಯಾಗಿಲಿದೆ ಎಂದು ಎಚ್ಚರಿಸಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಹೌರಾ, ಹೂಗ್ಲಿ ಮತ್ತು ಕೋಲ್ಕತ್ತಾದ ಗಂಗಾ ತೀರ ಪ್ರದೇಶದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ಮೇ 21ರವರೆಗೆ ಪಶ್ಚಿಮ ಬಂಗಾಳ-ಉತ್ತರ ಒಡಿಶಾ ತೀರದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಅಂಫಾನ್ ಚಂಡಮಾರುತ ಬೆಳಗ್ಗೆ 5:30ರ ಸುಮಾರಿಗೆ ಒಡಿಶಾದಿಂದ ದಕ್ಷಿಣಕ್ಕೆ 520 ಕಿ.ಮೀ ದೂರದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.