ಚೆನ್ನೈ: ನಗರದ ಮನಾಲಿ ಬಳಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಪೈಕಿ ಎರಡನೇ ಹಂತವಾಗಿ 229 ಟನ್ ಹೈದರಾಬಾದ್ಗೆ ಸ್ಥಳಾಂತರಿಸಲಾಗಿದೆ. ಉಳಿದಿರುವುದನ್ನು ಒಂದು ವಾರದೊಳಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಕರುರು ಜಿಲ್ಲೆಯ ಖಾಸಗಿ ಕಂಪನಿಯೊಂದು 2015 ರಲ್ಲಿ ದಕ್ಷಿಣ ಕೊರಿಯಾದಿಂದ 740 ಟನ್ ಅಮೋನಿಯಂ ನೈಟ್ರೇಟ್ನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಅಕ್ರಮ ನಡೆದಿರುವುದು ಕಂಡು ಬಂದ ಹಿನ್ನೆಲೆ, ಕಸ್ಟಮ್ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಮನಾಲಿಯ ರಾಸಾಯನಿಕ ಗೋದಾಮಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದರು. ಮಳೆ ಪ್ರವಾಹ ಮತ್ತು ಆವಿಯಾಗಿ 740 ಟನ್ ಇದ್ದ ಅಮೋನಿಯಂ ನೈಟ್ರೇಟ್ 43 ಟನ್ ಕಡಿಮೆಯಾಗಿದೆ. ಪ್ರಸ್ತುತ 697 ಟನ್ ಇದೆ. ಇದನ್ನು ಹರಾಜಿನಲ್ಲಿ ಹೈದರಾಬಾದ್ ಮೂಲದ ಕಂಪನಿ ಪಡೆದುಕೊಂಡಿದ್ದು, ಹೀಗಾಗಿ ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುತ್ತಿದೆ.