ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಾಳೆಯ ಅಮೋಘ ಜಯ ಗಳಿಸಿದ ನಂತರ, ಮೋದಿ ಸಂಪುಟದಲ್ಲಿ ಯಾರೆಲ್ಲಾ ಸಚಿವ ಸ್ಥಾನ ಗಿಟ್ಟಿಸಿಕೊಳ್ತಾರೆ ಎಂಬ ಕುತೂಹಲ ತೀವ್ರಗೊಂಡಿದೆ. ಸಂಪುಟದ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸುವ ಸಲುವಾಗಿ ಇಂದು ಮತ್ತೆ ಅಮಿತ್ ಶಾ, ಮೋದಿ ಅವರನ್ನು ಭೇಟಿಯಾಗಿ, ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಮಂತ್ರಿಮಂಡಲದ ರಚಿಸುವ ಕುರಿತಾಗಿ ಇಬ್ಬರೂ ನಿನ್ನೆ 5 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಇಂದು ಮತ್ತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಲ್ಯಾಣ ಮಾರ್ಗ್ನಲ್ಲಿರುವ ಮೋದಿ ನಿವಾಸದಲ್ಲಿ ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ನಾಳೆ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರೊಂದಿಗೆ ನೂತನ ಸಚಿವರು ಸಹ ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಮಾಣವಚನ ಸಮಾರಂಭದಲ್ಲಿಯೇ ಯಾರೆಲ್ಲಾ ಸಚಿವರಾಗ್ತಾರೆ ಎಂಬುದು ತಿಳಿಯಲಿದೆ.
ಅಮಿತ್ ಶಾ ಅವರನ್ನೂ ಒಳಗೊಂಡಂತೆ ಸಚಿವರ ಹೆಸರಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಮೂಲಗಳಂತೆ ಮೋದಿ ಅವರೊಂದಿಗೆ ನಾಳೆ 65 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಬಾರಿ ಮೋದಿ ಸಂಪುಟದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರಿಗೆ ಅವಕಾಶ ನೀಡಲಾಗ್ತಿದೆ ಎಂದು ತಿಳಿದುಬಂದಿದೆ. ಹಲವು ಮಹಿಳೆಯರೂ ಸೇರಿ ಶೇ.35ರಷ್ಟು ಹೊಸಬರಿಗೆ ಪಟ್ಟ ಕಟ್ಟುವ ನಿರೀಕ್ಷೆಯಿದೆ. ಅನುಭವ, ಪ್ರಾಂತೀಯತೆ ಹಾಗೂ ಜಾತಿ ಆಧಾರಿತವಾಗಿ ಸಚಿವ ಸ್ಥಾನಗಳನ್ನು ನಿಗದಿಗೊಳಿಸಲಾಗಿದೆ. ಗೃಹ, ಹಣಕಾಸು, ರಕ್ಷಣೆ ಹಾಗೂ ವಿದೇಶಾಂಗ ಖಾತೆಗಳಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಂದು ನಡೆದ ಸಭೆಯಲ್ಲಿ ಅರುಣ್ ಜೇಟ್ಲಿ ಸಂಪುಟದಿಂದ ಹೊರಗುಳಿದ ವಿಚಾರವೂ ಚರ್ಚೆಯಾಗಿದೆ. ಜತೆಗೆ, ಎನ್ಡಿಯ ಮಿತ್ರಕೂಟದ ಶಿವಸೇನೆ ಹಾಗೂ ಜೆಡಿಯುನ ಎಷ್ಟು ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆಯೂ ಮೋದಿ-ಶಾ ಮಾತುಕತೆ ನಡೆಸಿದ್ದಾರೆ.