ಲೇಹ್: ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದರ ಮಧ್ಯೆ ಮರಗಟ್ಟುವ ಚಳಿ ಎದುರಿಸಲು ಭಾರತೀಯ ಸೇನೆ ಇದೀಗ ಸನ್ನದ್ಧವಾಗುತ್ತಿದೆ.
ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಮರಗಟ್ಟುವ ಚಳಿ ಎದುರಿಸಲು ಸಿದ್ಧವಾಗ್ತಿರುವ ಸೇನೆ!
ಲಡಾಖ್ ಪ್ರದೇಶದಲ್ಲಿ ಮುಂದಿನ ತಿಂಗಳಿಂದ ಚಳಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಭಾರತೀಯ ಯೋಧರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಲಡಾಖ್ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ತಾಪಮಾನ ಶೂನ್ಯಕ್ಕಿಂತಲೂ ಕೆಳಮಟ್ಟಕ್ಕೆ ಹೋಗಲಿದೆ. ಹೀಗಾಗಿ ಈ ಅವಧಿಯಲ್ಲಿ ಲಡಾಖ್ನಿಂದ ಬೇರೆ ಬೇರೆ ಭಾಗಗಳಿಗೆ ಹೋಗುವ ಸಂಪರ್ಕ ಕಡಿತಗೊಳ್ಳಲಿದೆ. ಹೀಗಾಗಿ ಭಾರತ ಶಸ್ತ್ರಾಸ್ತ್ರ, ಇಂಧನ, ಆಹಾರ ಪದಾರ್ಥ ದಾಸ್ತಾನು ಮಾಡಿಕೊಳ್ಳುತ್ತಿದೆ.
ಇದರ ಜತೆಗೆ ತಾಪಮಾನ ಹೆಚ್ಚಿಸುವ ವಸ್ತುಗಳು, ಇಂಧನ, ಬಟ್ಟೆ ಸೇರಿದಂತೆ ಹೊಸ ಹೊಸ ಟೆಂಟ್ಗಳ ನಿರ್ಮಾಣ ಮಾಡುತ್ತಿದೆ. ಅಕ್ಟೋಬರ್ ತಿಂಗಳಿಂದ ಚಳಿಗಾಲ ಆರಂಭಗೊಳ್ಳಲಿದ್ದು, ಏಪ್ರಿಲ್ವರೆಗೂ ಇದು ಮುಂದುವರೆಯಲಿದೆ. ಹೀಗಾಗಿ ಚೀನಾ ಜತೆ ಮಾತ್ರವಲ್ಲದೇ ಚಳಿಯೊಂದಿಗೆ ಸೈನಿಕರು ಹೋರಾಡಬೇಕಾಗಿದೆ.