ನವದೆಹಲಿ :ಕೊರೊನಾ ಸೋಂಕಿನಿಂದಾಗಿ ಕಳೆದ ಕೆಲ ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಸಾರ್ಕ್ ರಾಷ್ಟ್ರಗಳ ಒಕ್ಕೂಟಕ್ಕೆ ತಮ್ಮ ನಡುವಿನ ಬಿಕ್ಕಟ್ಟು ಶಮನಗೊಳಿಸಲು ಅವಕಾಶ ನೀಡಲಿದೆಯಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಸಾರ್ಕ್ ಶೃಂಗಸಭೆ ನಿಗದಿಯಾಗಿತ್ತು. ಆದರೆ, ಜಮ್ಮು-ಕಾಶ್ಮೀರದ ಉರಿ ಮೇಲಿನ ಭಯೋತ್ಪಾದನಾ ದಾಳಿಯಿಂದಾಗಿ ಭಾರತ ಶೃಂಗಸಭೆ ಬಹಿಷ್ಕರಿಸಿತ್ತು. ಇದೀಗ ಕೊರೊನಾ ಸೋಂಕನ್ನು ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಪ್ರಧಾನಿ ಮೋದಿ ಸಾರ್ಕ್ ರಾಷ್ಟ್ರಗಳನ್ನು ಒಂದುಗೂಡಿಸುವತ್ತ ಹೆಜ್ಜೆ ಇರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ (ಸಾರ್ಕ್) ರಾಷ್ಟ್ರಗಳ ನಾಯಕತ್ವವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಲವಾದ ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನಮ್ಮ ನಾಗರಿಕರ ಆರೋಗ್ಯ ಕಾಪಾಡುವ ಮಾರ್ಗಗಳನ್ನು ನಾವು ಚರ್ಚಿಸಬಹುದು' ಎಂದಿದ್ದರು. ಸದ್ಯ ವಿದೇಶಾಂಗ ಸಚಿವಾಲಯದ ಪ್ರಕಾರ ಇನ್ನೂ ಯಾವುದೇ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಪ್ರಧಾನಮಂತ್ರಿಯವರ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದಂತೆ ವಿಡಿಯೋ ಕಾನ್ಫ್‌ರೆಸ್ಸ್ ವಿಚಾರವನ್ನು ಪ್ರಾದೇಶಿಕ ಮುಖಂಡರು ಸ್ವಾಗತಿಸಿದ್ದಾರೆ. ಈ ಮಹತ್ವದ ಪ್ರಯತ್ನಕ್ಕೆ ಮುಂದಾಳತ್ವ ತೆಗೆದುಕೊಂಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು.
ಕೋವಿಡ್-19 ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಮಾಲ್ಡೀವ್ಸ್ ಈ ಪ್ರಸ್ತಾಪವನ್ನು ಸ್ವಾಗತಿಸುತ್ತದೆ ಮತ್ತು ಅಂತಹ ಪ್ರಾದೇಶಿಕ ಪ್ರಯತ್ನವನ್ನು ಸಂಪೂರ್ಣ ಬೆಂಬಲಿಸುತ್ತದೆ' ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಟ್ವೀಟ್ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು ತಮ್ಮ ದೇಶವು ಚರ್ಚೆ ನಡೆಸಲು ಸಿದ್ಧವಾಗಿದೆ. ಮಾರಕ ಸೋಂಕನ್ನು ಎದುರಿಸಲು ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳಲು ಸಿದ್ಧವಾಗಿದೆ. ಮುಂದಾಳತ್ವ ತೆಗೆದುಕೊಂಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಶ್ರೀಲಂಕಾದ ರಾಜತಾಂತ್ರಿಕರೊಬ್ಬರು ಈ ವರ್ಷ ಸಾರ್ಕ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಆದರೆ, ಶ್ರೀಲಂಕಾದೊಂದಿಗಿನ ಇತ್ತೀಚಿನ ಅಧಿಕೃತ ಮಾತುಕತೆಗಳಲ್ಲಿ ಸಾರ್ಕ್ನ ಪುನರುಜ್ಜೀವನದ ಬಗ್ಗೆ ಭಾರತ ಯಾವುದೇ ಉತ್ಸಾಹ ತೋರಿಸಲಿಲ್ಲ. 2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಶೃಂಗಸಭೆಯಲ್ಲಿ ಉಪ-ಪ್ರಾದೇಶಿಕತೆ ಮುಂದುವರಿಯುವ ಅಗತ್ಯವನ್ನು ಒತ್ತಿ ಹೇಳಿದ್ದ ಪಿಎಂ ಮೋದಿ ಬಿಮ್ಸ್ಟೆಕ್ (BIMSTEC) ಒಂದು ಪರ್ಯಾಯ ಪ್ರಾದೇಶಿಕ ವೇದಿಕೆಯಾಗಲಿದೆ ಎಂದಿದ್ದರು. ಬಂಗಾಳ ಕೊಲ್ಲಿಯ ಕಡಲತೀರದ ಆರ್ಥಿಕತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1997ರಲ್ಲಿ ರಚಿಸಲಾದ ಒಕ್ಕೂಟವೇ ಬಿಮ್ಸ್ಟೆಕ್. ಬಿಮ್ಸ್ಟೆಕ್ ಎನ್ನುವುದು ಏಷ್ಯಾದ ಏಳು ದೇಶಗಳ ಮೊದಲ ಆಂಗ್ಲಪದ. ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ನೇಪಾಳ ಹಾಗೂ ಭೂತಾನ್ ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು.