ಅಮೇಥಿ: ರಾಹುಲ್ ಗಾಂಧಿ ಅವರ ನಾಮಪತ್ರ ಪರಿಶೀಲನೆಯನ್ನ ಏಪ್ರಿಲ್ 22ಕ್ಕೆ ಮುಂದೂಡಬೇಕೆಂದು ಅಮೇಥಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್, ರಾಹುಲ್ ಗಾಂಧಿ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಗೊಂದಲಗಳಿವೆ ಎಂದು ದೂರು ಸಲ್ಲಿಸಿದ್ದಾರೆ. ಈ ಕುರಿತಂತೆ ನಾವು ಪ್ರಮುಖವಾಗಿ ಮೂರು ಪ್ರಶ್ನೆಗಳನ್ನ ಮುಂದಿಟ್ಟಿದ್ದೇವೆ ಎಂದು ಧ್ರುವ್ ಲಾಲ್ ಪರ ವಕೀಲ ರವಿ ಪ್ರಕಾಶ್ ಹೇಳಿದ್ದಾರೆ.
ರಾಹುಲ್ ಗಾಂಧಿ ಬ್ರಿಟನ್ನಲ್ಲಿ ಒಂದು ಕಂಪನಿಯನ್ನು ನೋಂದಾಯಿಸಿದ್ದು, ಆ ಕಂಪನಿ ನೋಂದಾವಣಿ ಪ್ರಮಾಣಪತ್ರದಲ್ಲಿ ಬ್ರಿಟನ್ ಪ್ರಜೆಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಯಾವುದೇ ವಿದೇಶಿ ಪ್ರಜೆ ಭಾರತೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ನಾಗರಿಕರಾಗಿದ್ದಾರೆ? ಮತ್ತು ಭಾರತೀಯ ಪೌರತ್ವವನ್ನು ಹೇಗೆ ಪಡೆದರು? ಈ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ರಾಹುಲ್ ಗಾಂಧಿಯವರ ನಾಮಪತ್ರ ಸ್ವೀಕರಿಸದಂತೆ ಚುನವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
2003 ರಿಂದ 2009ರ ಮಧ್ಯೆ ಬ್ರಿಟನ್ ಕಂಪನಿಯ ಆಸ್ತಿ ಕುರಿತು ಅಫಿಡವಿಟ್ನಲ್ಲಿ ಯಾವುದೇ ವಿವರ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ರಾಹುಲ್ ವಿದ್ಯಾರ್ಹತೆ, ಅವರು ಸಲ್ಲಿಸಿರುವ ದಾಖಲೆಗಳಲ್ಲಿನ ವಿವರಗಳಿಗೆ ಹೊಂದಾಣಿಕೆ ಆಗುತ್ತಿಲ್ಲ. ಅವರು ತಮ್ಮ ಕಾಲೇಜಿನಲ್ಲಿ ರೌಲ್ ವಿನ್ಸಿ ಎಂದು ಹೆಸರು ಬಳಸಿದ್ದು, ರಾಹುಲ್ ಗಾಂಧಿ ಎಂಬ ಹೆಸರಿನಲ್ಲಿ ಯಾವುದೇ ಪ್ರಮಾಣಪತ್ರಗಳಿಲ್ಲ. ಹಾಗಾದರೆ, ರಾಹುಲ್ ಗಾಂಧಿ ಮತ್ತು ರೌಲ್ ವಿನ್ಸಿ ಒಬ್ಬರೆನಾ ಎಂದು ಪ್ರಶ್ನಿಸಿದ್ದು, ತಮ್ಮ ಮೂಲ ವಿದ್ಯಾರ್ಹತೆಯ ಅಂಕಪಟ್ಟಿಯನ್ನು ನೀಡಬೇಕು ಎಂದಿದ್ದಾರೆ.