ಹ್ಯೂಸ್ಟನ್:ಹ್ಯೂಸ್ಟನ್ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕಾಶ್ಮೀರದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಮಾತು ಕೂಡಾ ಆಡಲಿಲ್ಲ. ಆದರೂ ಸಹ ಗಡಿ ಭದ್ರತೆ ಕುರಿತು ಪ್ರಸ್ತಾಪಿಸಿದ ಅವರು, ಅಮೆರಿಕದಂತೆ ಭಾರತಕ್ಕೂ ತನ್ನ ಗಡಿ ರಕ್ಷಿಸಿಕೊಳ್ಳುವ ಹಕ್ಕಿದೆ ಎಂದಿದ್ದಾರೆ.
ಹೌಡಿ ಮೋದಿ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖುಷಿಯಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ಜನರ ಮುಂದೆ ಮಾತನಾಡಲು ಸಂತಸವಾಗುತ್ತಿದೆ ಎಂದರು. ಮುಂದುವರೆದು ಮಾತನಾಡಿದ ಅವರು, ಭಾರತ ಹಾಗೂ ಅಮೆರಿಕ ತಮ್ಮ ಸಮುದಾಯಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದನ್ನು ಅರ್ಥ ಮಾಡಿಕೊಂಡಿವೆ. ಅಲ್ಲದೆ ನಾವು ನಮ್ಮ ಗಡಿಗಳನ್ನು ರಕ್ಷಿಸಿಕೊಳ್ಳಲೇಬೇಕು ಎಂದಿದ್ದಾರೆ. ಇತ್ತೀಚೆಗಷ್ಟೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಭಾರತ ರದ್ದು ಮಾಡಿದ್ದು, ಟ್ರಂಪ್ರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ 370 ವಿಧಿ ರದ್ದು ವಿಚಾರವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಿತ್ತು. ಅಲ್ಲದೆ ಕಾರಣ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇದೆ. ಇದೀಗ ಟ್ರಂಪ್ರ ಈ ಹೇಳಿಕೆಯಿಂದಲಾದರೂ ಅದು ಸುಮ್ಮನಿರುತ್ತಾ ಅಂತಾ ಕಾದು ನೋಡಬೇಕಿದೆ.
ಇನ್ನು ಭಾರತದಲ್ಲಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಬಡತನ ನಿರ್ಮೂಲನೆಯಲ್ಲಿ ಭಾರತ ಗಮನಾರ್ಹ ಸಾಧನೆಗೈದಿದೆ. ಉಭಯ ದೇಶಗಳಲ್ಲಿ ಜನತೆಯನ್ನು ಗೌರವಿಸುವ ಸಂಪ್ರದಾಯವಿದೆ ಎಂದರು.ಅನಿವಾಸಿ ಭಾರತೀಯರು ಇಲ್ಲಿನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸುಂಕ ಕಡಿತ ಮತ್ತು ಪರಿಷ್ಕರಣೆ ಅಮೆರಿಕದಲ್ಲಿ ಬದಲಾವಣೆಗೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳಲ್ಲಿ ನಿರುದ್ಯೋಗ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಿರುದ್ಯೋಗ ಮುಂದಿನ ಕೆಲವೇ ವರ್ಷಗಳಲ್ಲಿ ಅಮೆರಿಕದಲ್ಲಿ ಇಲ್ಲವಾಗುತ್ತದೆ ಎಂದು ಟ್ರಂಪ್ ಹೇಳಿದರು.