ಕರ್ನಾಟಕ

karnataka

By

Published : Feb 25, 2020, 8:21 AM IST

Updated : Feb 25, 2020, 10:24 AM IST

ETV Bharat / bharat

ಇಂದು ದೆಹಲಿ ಸರ್ಕಾರಿ ಶಾಲೆಗೆ ಅಮೆರಿಕ ಪ್ರಥಮ ಮಹಿಳೆ ಭೇಟಿ, ಕೇಜ್ರಿವಾಲ್ ಪಾಲ್ಗೊಳ್ಳುವುದು ಅನುಮಾನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಭಾರತಕ್ಕೆ ಬಂದಿರುವ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಇಂದು ದೆಹಲಿಯ ನನಕ್​​ಪುರ್​ನ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ.

america first lady melania trump to visit delhi government school
ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ ಅಮೆರಿಕ ಪ್ರಥಮ ಮಹಿಳೆ

ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಭಾರತಕ್ಕೆ ಬಂದಿರುವ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಇಂದು ದೆಹಲಿಯ ನನಕ್​​ಪುರ್​ನ ಸರ್ವೋದಯ ಸೀನಿಯರ್​ ಸೆಕೆಂಡರಿ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ.

ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ ಅಮೆರಿಕ ಪ್ರಥಮ ಮಹಿಳೆ

ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ದೆಹಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದು, 'ಸಂತೋಷ ಪಠ್ಯಕ್ರಮ'ದ (happiness curriculum) ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಲಾನಿಯಾ ಒಬ್ಬರೇ ಭೇಟಿ ನೀಡಲಿದ್ದು, ಡೊನಾಲ್ಡ್​ ಟ್ರಂಪ್​ ಶಾಲೆಗೆ ಭೇಟಿ ನೀಡುತ್ತಿಲ್ಲ. ಮೂಲಗಳ ಪ್ರಕಾರ ಮಧ್ಯಾಹ್ನದ ವೇಳೆಗೆ ಮೆಲಾನಿಯಾ ಟ್ರಂಪ್​ ಶಾಲೆಗೆ ಭೇಟಿ ನೀಡಲಿದ್ದು, ಒಂದು ಗಂಟೆ ಕಾಲ ಶಾಲೆಯಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ಮೆಲಾನಿಯಾ ಭೇಟಿ ಹಿನ್ನೆಲೆ ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಲಾಗಿದೆ. ದಾರಿಯುದ್ದಕ್ಕೂ ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಲಾಗಿದೆ. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ. ಇನ್ನು ಭದ್ರತಾ ಸಂಸ್ಥೆಗಳ ನಿರ್ದೇಶನದಂತೆ ಶಾಲೆಗೆ ತೆರಳುವ ಮಾರ್ಗದಲ್ಲಿ ಮರಗಳನ್ನು ಕತ್ತರಿಸಿ, ಶಾಲೆಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್​​ ಏರ್ಪಡಿಸಲಾಗಿದೆ.

ಶಾಲೆ ಭೇಟಿಯ ಸಮಯದಲ್ಲಿ, ಅವರು ಶಾಲೆಯ ವಿವಿಧ ತರಗತಿಗಳಿಗೆ ಹೋಗಬಹುದು, ವಿದ್ಯಾರ್ಥಿಗಳೊಂದಿಗೆ ಮಾತನಾಡಬಹುದು ಮತ್ತು 'ಸಂತೋಷದ ಪಠ್ಯಕ್ರಮ'ದ ಭಾಗವಾಗಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳಿಗೆ ಪಾಲ್ಗೊಳ್ಳಬಹುದು ಎನ್ನಲಾಗಿದೆ.

ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ಮೆಲಾನಿಯವರನ್ನು ಶಾಲೆಯಲ್ಲಿ ಸ್ವಾಗತಿಸಲು ಮತ್ತು 'ಸಂತೋಷ ಪಠ್ಯಕ್ರಮ ಬಗ್ಗೆ ತಿಳಿಸಲಿದ್ದಾರೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಈ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರುಗಳಿಲ್ಲ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ಆಮ್​ ಆದ್ಮಿ ಬೇಸರ:

ಇಬ್ಬರು ನಾಯಕರ ಹೆಸರನ್ನು ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಬೇಸರ ಹಾಗೂ ಅಸಮಾಧಾನ ಹೊರಹಾಕಿರುವ ಆಮ್ ಆದ್ಮಿ ಪಕ್ಷ , ಯಾವುದೇ ವಿದೇಶಿ ನಾಯಕರು ತಮ್ಮ ರಾಜ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಾಜರಾದಾಗ ರಾಜ್ಯ ನಾಯಕರು ಇರಬೇಕು ಎಂಬುದು ಶಿಷ್ಟಾಚಾರ, ಆದರೆ ಇಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೆಸರನ್ನೇ ಕೈ ಬಿಡಲಾಗಿದೆ ಎಂದು ಅಸಮಾಧಾನ ಹೊರಹಾಕಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಪಕ್ಷ ಆರೋಪಿಸಿದೆ.

ಇನ್ನು ಮೆಲಾನಿಯಾ ಟ್ರಂಪ್ ಅವರ ಶಾಲಾ ಭೇಟಿಯ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಸಿಸೋಡಿಯಾ ಹಾಜರಿರಲು ಯಾವುದೇ ಆಕ್ಷೇಪವಿಲ್ಲ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ತುಂಬ ಉತ್ಸುಕರಾಗಿದ್ದೆವು: ಸಿಸೋಡಿಯಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಶಿಕ್ಷಣ ಮಂತ್ರಿಯೂ ಆಗಿರುವ ಡಿಸಿಎಂ ಸಿಸೋಡಿಯಾ, ಅಮೆರಿಕದ ಪ್ರಥಮ ಮಹಿಳೆಯನ್ನು ಶಾಲೆಗೆ ಸ್ವಾಗತಿಸಲು ಉತ್ಸುಕರಾಗಿದ್ದೆವು ಎಂದಿದ್ದಾರೆ. ಅದೇ ರೀತಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಿರುವುದು ದೆಹಲಿ ಸರ್ಕಾರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರುತಿಳಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಎಎಪಿ ಸರ್ಕಾರ ಆರಂಭಿಸಿದ ಹ್ಯಾಪಿನೆಸ್ ತರಗತಿಯಂತಹ ಕಾರ್ಯಗಳು ವಿಶೇಷವಾಗಿ ಜಗತ್ತಿನಲ್ಲೆಡೆ ಮಾನ್ಯತೆ ಪಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಸಿಸೋಡಿಯಾ ಹೇಳಿದ್ದಾರೆ.

ಏನಿದು 'ಸಂತೋಷ ಪಠ್ಯಕ್ರಮ' ಅಥವಾ happiness curriculum?

ದೆಹಲಿ ಸರ್ಕಾರ 2018 ರ ಜುಲೈನಲ್ಲಿ 'ಸಂತೋಷ ಪಠ್ಯಕ್ರಮ' ಅಥವಾ happiness curriculum ಅನ್ನು ಪರಿಚಯಿಸಿತು. ಇದು ಪಠ್ಯಕ್ರಮದ ಭಾಗವಾಗಿ, ದೆಹಲಿ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರತಿದಿನ 45 ನಿಮಿಷಗಳ ಮಕ್ಕಳಿಗೆ ಕಥೆ ಹೇಳುವುದು, ಧ್ಯಾನ ಮತ್ತು ಪ್ರಶ್ನೋತ್ತರ ಅವಧಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತೆ. ನರ್ಸರಿ ಮತ್ತು ಶಿಶುವಿಹಾರದ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ಈ ತರಗತಿಗಳು ನಡೆಯುತ್ತವೆ.

Last Updated : Feb 25, 2020, 10:24 AM IST

For All Latest Updates

ABOUT THE AUTHOR

...view details