ಬಹುಶಃ ಇಂತಹ ಸ್ವಾಗತವನ್ನು ಅವರು ಮುಂದೆಂದೂ ಕಾಣುವುದೂ ಸಾಧ್ಯವಿರಲಾರದು. ಫೆಬ್ರವರಿ 12ರಂದು, ಭಾರತಕ್ಕೆ ಭೇಟಿ ನೀಡಲಿರುವ ವಿಷಯವನ್ನು ಅಧ್ಯಕ್ಷರ ಅಧಿಕೃತ ಕಚೇರಿ ಓವಲ್ ಆಫೀಸ್ನಲ್ಲಿ ಅವರು ಖುದ್ದಾಗಿ ಘೋಷಿಸಿದ್ದರು. ವಿಮಾನ ನಿಲ್ದಾಣದಿಂದ ಹೊರಟು ನೂತನವಾಗಿ ನಿರ್ಮಿಸಲಾಗಿರುವ ಜಗತ್ತಿನ ಅತಿ ದೊಡ್ಡ ಸರ್ದಾರ್ ಪಟೇಲ್ ಕ್ರೀಡಾಂಗಣದತ್ತ ತಾವು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊರಟಾಗ, ದಾರಿಯುದ್ದಕ್ಕೂ ತಮ್ಮನ್ನು ಸ್ವಾಗತಿಸಲು ಕೋಟಿಗಟ್ಟಲೇ ಜನ ಕಾಯ್ದಿರುತ್ತಾರೆ. ನಂತರ, ಅಲ್ಲಿ ತಾವು ಸುಮಾರು 1,00,000 ಜನರನ್ನು ಉದ್ದೇಶಿಸಿ ಭಾಷಣ ಮಾಡಲಿರುವುದಾಗಿ ಅಂದು ಅವರು ಭಾವೋದ್ವೇಗದಿಂದ ಹೇಳಿಕೊಂಡಿದ್ದರು.
ಮಹತ್ವದ ವಾಣಿಜ್ಯ ಒಪ್ಪಂದ ಹಾಗೂ ರಕ್ಷಣಾ ಸಾಧನ ಸರಬರಾಜು ಒಪ್ಪಂದಗಳಿಗೆ ಅವರು ನವದೆಹಲಿಯಲ್ಲಿ ಸಹಿ ಹಾಕುವ ಸಾಧ್ಯತೆಗಳಿವೆ. ಪರಸ್ಪರ ಆಸಕ್ತಿ ಹಾಗೂ ಕಾಳಜಿ ಹೊಂದಿರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಈ ಇಬ್ಬರೂ ನಾಯಕರು ಮಾತುಕತೆ ವೇಳೆ ಪ್ರಸ್ತಾಪಿಸಲಿದ್ದಾರೆ. ಭಾರತ ಮತ್ತು ಅಮೆರಿಕ ದೇಶಗಳು ಸುಮಾರು 60ಕ್ಕೂ ಹೆಚ್ಚು ಉನ್ನತ ಹಂತದ ಮಾತುಕತೆ ವ್ಯವಸ್ಥೆಯನ್ನು ಹೊಂದಿರುವುದು ಗಮನಾರ್ಹ. ಅಮೆರಿಕದ ವಾಷಿಂಗ್ಟನ್ನಲ್ಲಿ ಡಿಸೆಂಬರ್ 2019ರಲ್ಲಿ ನಡೆದಿದ್ದ ಎರಡನೇ ಸುತ್ತಿನ “2+2 ಸಚಿವಾಯಗಳ ಮಾತುಕತೆ” (ವಿದೇಶಾಂಗ ಮತ್ತು ರಕ್ಷಣಾ ಖಾತೆಗಳ ಸಚಿವರು) ಸಹ ಇದರಲ್ಲಿ ಸೇರ್ಪಡೆಯಾಗಿದೆ.
ಭಾರತ ಮತ್ತು ಅಮೆರಿಕ ದೇಶಗಳ “ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ” ಗಟ್ಟಿಗೊಂಡಿದ್ದು 2016ರ ಜೂನ್ ತಿಂಗಳಿನಲ್ಲಿ. ಭಾರತವನ್ನು ತನ್ನ “ಪ್ರಮುಖ ರಕ್ಷಣಾ ಪಾಲುದಾರ” ಎಂದು ಮನ್ನಣೆ ನೀಡಿದ ಅಮೆರಿಕ, ಆ ಮೂಲಕ ಭಾರತವನ್ನು ತನ್ನ ಇತರ ನಿಕಟ ಮಿತ್ರದೇಶಗಳು ಹಾಗೂ ಪಾಲುದಾರರಿಗೆ ಹತ್ತಿರವಾಗಿಸಿತು. ನಲ್ವತ್ತು ವರ್ಷಗಳಿಂದ, 2005ರವರೆಗೆ, ಅಕ್ಷರಶಃ ಒಂದೇ ಒಂದು ರಕ್ಷಣಾ ಸಾಧನವನ್ನೂ ಅಮೆರಿಕದಿಂದ ಭಾರತ ಆಮದು ಮಾಡಿಕೊಂಡಿದ್ದಿಲ್ಲ. ಆದರೆ, ಕಳೆದ 15 ವರ್ಷಗಳಲ್ಲಿ ಭಾರತದ ಎರಡನೇ ಅತಿ ದೊಡ್ಡ ರಕ್ಷಣಾ ಪಾಲುದಾರ ದೇಶವಾಗಿ ಅಮೆರಿಕ ಹೊಮ್ಮಿದೆ. ಅದು ಒದಗಿಸುತ್ತ ಬಂದಿರುವ ಅತ್ಯುಚ್ಚ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು, ರಕ್ಷಣಾ ಸಾಧನಗಳ ಮೌಲ್ಯ $1800 ಕೋಟಿ ಡಾಲರ್ಗಳಷ್ಟು. ಇಂತಹ ಹಲವಾರು ಆಮದು ಒಪ್ಪಂದಗಳು ಸಿದ್ಧತಾ ಹಂತದಲ್ಲಿವೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, 1971ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ನಿಕ್ಸನ್ ಅವರು ಯುದ್ಧವಿಮಾನ ವಾಹಕ ನೌಕೆ ಯುಎಸ್ಎಸ್ ಎಂಟರ್ ಪ್ರೈಸ್ ಸಹಿತ ಅಮೆರಿಕದ 7ನೇ ನೌಕಾದಳವನ್ನು ಬಂಗಾಳ ಕೊಲ್ಲಿಯತ್ತ ಸಾಗುವಂತೆ ಆದೇಶಿಸಿದ್ದರು ಎಂಬುದನ್ನು ನಂಬುವುದು ಕಷ್ಟವಾಗುತ್ತದೆ. ಪಾಕಿಸ್ತಾನದ ದೌರ್ಜನ್ಯದಿಂದ ಬಾಂಗ್ಲಾದೇಶವನ್ನು ರಕ್ಷಿಸುವ ಉದ್ದೇಶದಿಂದ ಆ ದೇಶದ ಸ್ವತಂತ್ರ ಯೋಧರಿಗೆ ಭಾರತ ನೆರವಾಗುವುದನ್ನು ತಡೆಯುವ ಉದ್ದೇಶ ಅಮೆರಿಕದ್ದಾಗಿತ್ತು. ಇಷ್ಟೇ ಅಲ್ಲ, ತನ್ನ ಹೊಸ ಮಿತ್ರ ಚೀನಾ ದೇಶವನ್ನು ಬೆಂಬಲಿಸುವ ಮೂಲಕ, ಭಾರತದ ವಿರುದ್ಧ ಮತ್ತೊಂದು ಸವಾಲು ಎತ್ತಿಕಟ್ಟಲು ಅಮೆರಿಕ ಯತ್ನಿಸಿತ್ತು.
ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರಿಂದ 1998ರಲ್ಲಿ ಭಾರತದ ಮೇಲೆ ಹೇರಲಾಗಿದ್ದ ನಿಷೇಧವನ್ನು 1999ರಲ್ಲಿ ತೆಗೆದು ಹಾಕುವ ಮೂಲಕ ಭಾರತದೊಂದಿಗೆ ಸ್ನೇಹ ಬೆಳೆಸಲು ಅಮೆರಿಕ ಮುಂದಾಗಿತು. ಆದರೂ, ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯ ಉಪಕಾರ್ಯದರ್ಶಿ ಸ್ಟ್ರೊಬ್ ಟಾಲ್ಬೊಟ್ ನಡುವೆ 1998ರಿಂದ 2000ನೇ ಅವಧಿಯಲ್ಲಿ ಒಟ್ಟು 7 ದೇಶಗಳು ಹಾಗೂ 3 ಖಂಡಗಳಲ್ಲಿ ನಡೆದ 14 ವಿಸ್ತೃತ ಸ್ವರೂಪದ ಮಾತುಕತೆಗಳು ನಡೆದ ನಂತರವಷ್ಟೇ, ಅದುವರೆಗೆ ಇದ್ದ ಸಂಕಷ್ಟಕರ ಪರಿಸ್ಥಿತಿಯು ಅವಕಾಶವಾಗಿ ಬದಲಾಯಿತು. ಸುಮಾರು 22 ವರ್ಷಗಳ ನಂತರ, 2000 ಮಾರ್ಚ್ ನಲ್ಲಿ ಭಾರತಕ್ಕೆ 5 ದಿನಗಳ ಭೇಟಿ ನೀಡಿದ್ದ ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮೂಲಕ ಭಾರತ ಮತ್ತು ಅಮೆರಿಕದ ಸಂಬಂಧಗಳ ಕುರಿತಂತೆ ಹೊಸ ಶಕೆ ಪ್ರಾರಂಭವಾಯಿತು. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ.