ನವದೆಹಲಿ:ಸಂಸದೀಯ ಸಮಿತಿ ಸಭೆಗಳಲ್ಲಿ ಚುನಾಯಿತ ಸಂಸದರಿಗೆ ಮುಕ್ತವಾಗಿ ಹಾಗೂ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸದಾವಕಾಶ ಮಾಡಿಕೊಡಬೇಕು ಎಂದು ಸಂಸದ ರಾಹುಲ್ ಗಾಂಧಿ ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದ್ದಾರೆ. ನಿನ್ನೆ ನಡೆದ ಘಟನೆಯ ನಂತರ ಅವರು ತಮ್ಮ ಈ ಹೇಳಿಕೆಯನ್ನು ನೀಡಿದ್ದಾರೆ.
ದೇಶದ ಭದ್ರತೆಗೆ ಸಂಬಂಧಪಟ್ಟ ಮುಖ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸದೇ ಸೇನಾ ಪಡೆಯ ಸಿಬ್ಬಂದಿಯ ಸಮವಸ್ತ್ರದ ಬಗ್ಗೆ ಚರ್ಚಿಸುವ ಮೂಲಕ ಬಿಜೆಪಿ ನಾಯಕರು ಸಮಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡದಿದ್ದರಿಂದ ಸಭೆಯಿಂದ ರಾಹುಲ್ ಗಾಂಧಿ ಹೊರ ನಡೆದಿದ್ದರು. ಅವಕಾಶ ಮಾಡಿಕೊಡುವಂತೆ ಇಂದು ಸ್ಪೀಕರ್ ಅವರಲ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವವನ್ನು ತೊಡೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ: ರಾಹುಲ್ ಗಾಂಧಿ
ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಸಿಬ್ಬಂದಿಗೆ ಸಮವಸ್ತ್ರ ನೀಡುವ ಬಗ್ಗೆ ಚರ್ಚಿಸಲಾಗುತ್ತಿತ್ತು. ಆಗ ಮಧ್ಯೆ ಪ್ರವೇಶಿಸಿದ ರಾಹುಲ್ ಗಾಂಧಿ, ದೇಶದ ಮೇಲೆ ಚೀನಾ ಪದೇ ಪದೆ ಆಕ್ರಮಣ ಮಾಡುತ್ತಿದೆ. ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಎತ್ತುವಂತೆ ಮತ್ತು ಲಡಾಖ್‌ನ ಗಡಿಯಲ್ಲಿ ನಮ್ಮ ಸೈನಿಕರನ್ನು ಯಾವ ರೀತಿಯಲ್ಲಿ ಸಜ್ಜುಗೊಳಿಸಬೇಕು ಎಂಬುದರ ಚರ್ಚೆ ಮಾಡಬೇಕು. ವಿನಾಕಾರಣ ಕಾಲಹರಣ ಮಾಡಬಾರದು ಎಂದಾಗ ಅವರನ್ನು ಸಮಿತಿಯ ಅಧ್ಯಕ್ಷ ಜುಯಲ್ ಓರಂ (ಬಿಜೆಪಿ) ಅವರು ತಡೆದಿದ್ದರು. ಇದರಿಂದ ತಮ್ಮ ಮಾತುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಸದಸ್ಯರಾದ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಹೊರ ನಡೆದಿದ್ದರು.
ಇದನ್ನೂ ಓದಿ : ಕೇಂದ್ರದಲ್ಲಿ 'ಸುಳ್ಳು ಮತ್ತು ಲೂಟಿಕೋರರ' ಸರ್ಕಾರವಿದೆ: ರಾಹುಲ್ ಗಾಂಧಿ
ಆಯಾ ಪಡೆಗಳ ಮುಖ್ಯಸ್ಥರು ಸಮವಸ್ತ್ರದ ಬಣ್ಣ ಹೇಗಿರಬೇಕು ಎಂಬುದನ್ನು ಅವರು ನಿರ್ಧರಿಸಬೇಕು. ಇದು ರಾಜಕಾರಣಿಗಳ ಕೆಲಸವಲ್ಲ. ಸೇನಾ ಪಡೆಯಾಗಲಿ, ನೌಕಾ ಪಡೆಯಾಗಲಿ ಅಥವಾ ವಾಯು ಪಡೆಯಾಗಲಿ ಅವರ ಸಮವಸ್ತ್ರಗಳು ಹೀಗೇ ಇರಬೇಕೆಂದು ಹೇಳುವ ಅಧಿಕಾರ ಇಟ್ಟುಕೊಳ್ಳಬಾರದು. ಈ ತರಹದ ಮಧ್ಯಸ್ಥಿಕೆ ಮಾಡುವುದರಿಂದ ಸೇನಾ ಪಡೆಗಳ ಅಧಿಕಾರ ವ್ಯಾಪ್ತಿಯನ್ನು ಅವಮಾನಿಸಿದಂತಾಗುತ್ತದೆ. ಈ ತರಹದ ಚರ್ಚೆಯಿಂದ ವಿನಾ ಕಾರಣ ಕಾಲಹರಣ ಮಾಡಲಾಗುತ್ತದೆ ಎಂದು ಅವರು ಆರೋಪಿಸಿ ಹೊರ ನಡೆದಿದ್ದರು.
ಆದ್ದರಿಂದ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿಕೊಂಡಿರುವ ರಾಹುಲ್ ಗಾಂಧಿ, ಸಭೆಗಳಲ್ಲಿ ಚುನಾಯಿತ ಸಂಸದರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.