ಲಖನೌ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್ಗಳ ನೇಮಕದಲ್ಲಿ ಸ್ವಜನ ಪಕ್ಷಪಾತ ಹಾಗೂ ಜಾತೀಯತೆ ನೀತಿ ಅನುಸರಿಸಲಾಗ್ತಿದೆ ಎಂದು ಆರೋಪಿಸಿರುವ ಅಲಹಾಬಾದ್ ಹೈಕೋರ್ಟ್ ಜಡ್ಜ್ ರಂಗನಾಥ್ ಪಾಂಡೆ, ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ದುರದೃಷ್ಟವಶಾತ್, ಭಾರತದ ನ್ಯಾಯಾಂಗ ವ್ಯವಸ್ಥೆ, ಸ್ವಜನಪಕ್ಷಪಾತ ಹಾಗೂ ಜಾತೀಯತೆಯ ವ್ಯಾಪಕ ಪ್ರಭಾವದಡಿಯಲ್ಲಿದೆ. ನ್ಯಾಯಮೂರ್ತಿಗಳ ಕುಟುಂಬದವರಿಗೆ ವ್ಯವಸ್ಥೆಯೊಳಗೆ ನೇರ ಪ್ರವೇಶ ಸಿಗುತ್ತಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್ಗಳ ನೇಮಕಾತಿಯಲ್ಲಿ ಒಂದು ಸುವ್ಯವಸ್ಥೆ ಎಂಬುದೇ ಇಲ್ಲ ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ಹಿರಿಯ ಜಡ್ಜ್ಗಳು ಕೋಣೆಯ ಬಾಗಿಲು ಮುಚ್ಚಿಕೊಂಡು, ಟೀ ಕುಡಿಯುತ್ತ ಸುಪ್ರೀಂ ಹಾಗೂ ಹೈಕೋರ್ಟ್ಗಳಿಗೆ ಜಡ್ಜ್ಗಳನ್ನು ನೇಮಕ ಮಾಡುತ್ತಿದ್ದಾರೆ. ನೇಮಕ ಪ್ರಕ್ರಿಯೆ ಭಾರಿ ಗೌಪ್ಯವಾಗಿ ನಡೆದು, ಎಲ್ಲವೂ ಪೂರ್ಣಗೊಂಡ ನಂತರವೇ ಸಾರ್ವಜನಿಕಗೊಳಿಸಲಾಗ್ತಿದೆ. ಅದುವರೆಗೂ ಏನಾಯ್ತು? ಯಾವ ಮಾನದಂಡ ಅನುಸರಿಸಲಾಯ್ತು? ಎಂದು ಯಾರಿಗೂ ಗೊತ್ತಾಗಲ್ಲ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಬಗ್ಗೆಯೂ ಬರೆದಿರುವ ಅವರು, ಇಂತಹ ಆಯೋಗಗಳಿಂದ ಪಾರದರ್ಶಕತೆ ತರಬಹುದಾದರೂ, ನ್ಯಾಯಾಂಗ ಸ್ವಾತಂತ್ರ್ಯದ ಹೆಸರು ಹೇಳಿ ಜಸ್ಟೀಸ್ಗಳು ಪ್ರಸ್ತಾವನಯನ್ನೇ ರದ್ದು ಮಾಡುವ ಸಾಧ್ಯತೆಯಿದೆ ಎಂದಿದ್ದಾರೆ.
ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರದಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಉಳಿಸಬೇಕಿದೆ. ಪ್ರಾಮಾಣಿಕತೆ ಹಾಗೂ ಪರಿಶ್ರಮವುಳ್ಳವರು ಮಾತ್ರ ನ್ಯಾಯಮೂರ್ತಿಗಳಾಗ್ತಾರೆ ಎಂದು ಜನರು ಹೇಳುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.