ಲಖನೌ(ಉತ್ತರ ಪ್ರದೇಶ): ಶಿಕ್ಷಣ ಕ್ಷೇತ್ರಕ್ಕೂ ಕೊರೊನಾ ತನ್ನ ಕರಿನೆರಳು ಬೀರಿದೆ. ವಿದ್ಯಾರ್ಥಿಗಳನ್ನು ಈ ವೈರಸ್ನಿಂದ ದೂರವಿಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ 1ರಿಂದ 8ನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಮಾರ್ಚ್ 23ರಿಂದ 28ರವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಹಾವಳಿ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶಿದೆ.
ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ, ಒಂದರಿಂದ ಎಂಟನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ಅರ್ಹತೆ ನೀಡಲು ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಎಲ್ಲಾ ಶಾಲೆಗಳನ್ನು ಏಪ್ರಿಲ್ 2 ರವರೆಗೆ ಬಂದ್ ಮಾಡಲಾಗುತ್ತದೆ ಎಂದು ಶಿಕ್ಷಣ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೇಣುಕಾ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆ, ಚಿತ್ರಮಂದಿರ ಹಾಗೂ ಪ್ರವಾಸಿ ಸ್ಥಳಗಳ ಏಪ್ರಿಲ್ 2ರವರೆಗೆ ಬಂದ್ ಮಾಡಬೇಕೆಂದು ಆದೇಶ ಹೊರಡಿಸಿದೆ. ಅಲ್ಲದೆ ಸ್ಪರ್ಧಾತ್ಮಕ ಹಾಗೂ ಇತರ ಪರೀಕ್ಷೆಗಳನ್ನು ಏಪ್ರಿಲ್ 2ರವರೆಗೆ ಮುಂದೂಡಲಾಗಿದೆ.