ಕರಾಚಿ :ಕೊರೊನಾ ಹರಡುವಿಕೆ ಕಡಿಮೆಯಾದ ನಂತರ ಪುರುಷರ ಟಿ - 20 ವಿಶ್ವಕಪ್ ಅನ್ನು ಸೂಕ್ತ ಸಮಯದಲ್ಲಿ ಆಯೋಜಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪಾಕಿಸ್ತಾನದ ಮಾಜಿ ಬೌಲರ್ ವಾಸಿಮ್ ಅಕ್ರಮ್ ಒತ್ತಾಯಿಸಿದ್ದಾರೆ.
ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೆ ನೀಡಿದ ಅವರು, ಕೊರೊನಾ ವೈರಸ್ ಭೀತಿ ಹಿನ್ನೆಲೆ ಅಂತಾರಾಷ್ಟ್ರೀಯ ನಿರ್ಬಂಧ ಇರುವುದರಿಂದ ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ - 20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವುದು ಉತ್ತಮ ಎಂದು ತಿಳಿಸಿದ್ದಾರೆ.
ಐಸಿಸಿಗೆ ವಾಸಿಮ್ ಅಕ್ರಮ್ ಸಲಹೆ ನನ್ನ ಪ್ರಕಾರ ಪ್ರೇಕ್ಷಕರಿಲ್ಲದೇ ಕ್ರಿಕೆಟ್ ವಿಶ್ವಕಪ್ ನಡೆಸಲು ಸಾಧ್ಯವಿಲ್ಲ. ವಿಶ್ವಕಪ್ ಎಂದರೆ ಜನ ಸಮೂಹ ಸೇರುವ ದೊಡ್ಡ ಹಬ್ಬ, ಪ್ರಪಂಚದ ಎಲ್ಲ ಭಾಗಗಳಿಂದ ಪ್ರೇಕ್ಷಕರು ತಮ್ಮ ತಂಡಗಳನ್ನು ಬೆಂಬಲಿಸಲು ಬರುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನಿರ್ಬಂಧ ಇರುವುದರಿಂದ ಪ್ರೇಕ್ಷಕರು ಬರಲು ಸಾಧ್ಯವಿಲ್ಲ. ಪ್ರೇಕ್ಷಕರಿಲ್ಲದೇ, ಟೂರ್ನಿ ನಡೆಸುವುದು ಸೂಕ್ತವಲ್ಲ ಎಂದರು.
ಮೇ 28 ರಂದು ನಡೆದ ಐಸಿಸಿ ಸಭೆಯಲ್ಲಿ, ಜೂನ್ 20ರ ನಂತರ ಟಿ - 20 ವಿಶ್ವಕಪ್ ಭವಿಷ್ಯ ನಿರ್ಧರಿಸುವುದಾಗಿ ತಿಳಿಸಿದೆ, ಆದ್ದರಿಂದ ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವುದು ಹೆಚ್ಚು ಸೂಕ್ತ ಮತ್ತು ಸರಿಯಾದ ಸಮಯಕ್ಕಾಗಿ ಕಾಯಬೇಕು ಎಂದರು.
ಚೆಂಡಿನ ಮೇಲೆ ಹಿಡಿತ ಸಾಧಿಸಲು ಚೆಂಡಿಗೆ ಎಂಜಲು ಸವರುವುದನ್ನು ನಿಷೇಧಿಸುವಂತೆ ಐಸಿಸಿ ಕ್ರಿಕೆಟ್ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿದೆ. ಆದರೀಗ ಕೊರೊನಾ ವೈರಸ್ ಭಯ ಎದುರಿಸಲು ಈ ಕ್ರಮ ಅಗತ್ಯವಾಗಿದೆ ಎಂದರು.