ಲಖನೌ (ಉತ್ತರ ಪ್ರದೇಶ):ಮಧ್ಯಪ್ರದೇಶದಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್, ಕಾನ್ಪುರ ಎನ್ಕೌಂಟರ್ನ ಪ್ರಮುಖ ಆರೋಪಿ ವಿಕಾಸ್ ದುಬೆ ಬಂಧನವಾಗಿದೆ. ಉತ್ತರಪ್ರದೇಶ ಸರ್ಕಾರಕ್ಕೆ ವಿಕಾಸ್ ದುಬೆ ಹಸ್ತಾಂತರ ಪ್ರಕ್ರಿಯೆ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ ಆ ರಾಜ್ಯದ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗಿನ ಬಿರುಗಾಳಿ ಏಳುವ ಸಾಧ್ಯತೆಗಳಿವೆ.
ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಲ ದೇವಾಲಯದಲ್ಲಿ ವಿಕಾಸ ದುಬೆ ಬಂಧನವಾಗುತ್ತಿದ್ದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ''ವಿಕಾಸ್ ದುಬೆಯದ್ದು ಶರಣಾಗತಿಯೋ.? ಅಥವಾ ಪೊಲೀಸರು ಬಂಧಿಸಿದ್ದಾ..?'' ಎಂದು ತಮ್ಮ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಈ ಟ್ವೀಟ್ನಲ್ಲಿ ವಿಕಾಸ್ ದುಬೆ ಬಂಧನ ಕುರಿತು ಅನುಮಾನ ವ್ಯಕ್ತಪಡಿಸಿರುವುದು ಮಾತ್ರವಲ್ಲದೇ ಮಧ್ಯಪ್ರದೇಶ ಪೊಲೀಸರನ್ನು ಅಖಿಲೇಶ್ ಸಿಂಗ್ ಯಾದವ್ ಪ್ರಶ್ನಿಸಿರುವುದು ಚರ್ಚೆಗೆ ಕಾರಣವಾಗಿದೆ.
ವಿಕಾಸ್ ದುಬೆ ಬಂಧನದ ಬೆನ್ನಲ್ಲೇ ಲಖನೌದಲ್ಲಿ ಪ್ರತಿಕ್ರಿಯೆ ನೀಡಿರುವ ಆತನ ತಾಯಿ ಸರಳಾ ದೇವಿ ''ಮೊದಲು ನನ್ನ ಮಗ ಸಮಾಜವಾದಿ ಪಕ್ಷದಲ್ಲಿದ್ದ, ಈಗ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದು, ತನಗೆ ಸರಿ ಅನ್ನಿಸಿದ್ದನ್ನು ಮಾಡುತ್ತದೆ. ಈ ಬಗ್ಗೆ ನನಗೇನೂ ತಿಳಿಯುವುದಿಲ್ಲ. ನಾನು ಏನು ಹೇಳುತ್ತೇನೆ ಎಂಬುದು ಮುಖ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯ ಸಂಬಂಧಿಗಳಿದ್ದು, ಆತ ಪ್ರತಿವರ್ಷವೂ ಮಹಾಕಾಲ ದೇವಾಲಯಕ್ಕೆ ತೆರಳುತ್ತಾನೆ ಎಂದು ವಿಕಾಸ್ ದುಬೆಯ ತಾಯಿ ಹೇಳಿಕೆ ನೀಡಿದ್ದಾರೆ.
ವಿಕಾಸ್ ದುಬೆ ತಾಯಿ ಸರಳಾದೇವಿ
ಕಾನ್ಪುರದ ಎನ್ಕೌಂಟರ್ನಲ್ಲಿ ಎಂಟು ಮಂದಿ ಪೊಲೀಸರನ್ನು ಕೊಂದ ಆರೋಪದಲ್ಲಿ ಮುಖ್ಯ ಆರೋಪಿ ವಿಕಾಸ್ ದುಬೆಗಾಗಿ ಪೊಲೀಸರು ಭಾರೀ ಶೋಧ ನಡೆಸಿದ್ದರು. ಇಂದು ಬೆಳಗ್ಗೆ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ವಿಕಾಸ್ ದುಬೆ ಉಜ್ಜೈನಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಆತನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.