ಮುಂಬೈ:ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಗೆ ಇಂದು ಅಧಿಕೃತ ತೆರೆಬೀಳಲಿದ್ದು, ಮಹಾಮೈತ್ರಿಕೂಟದ(ಮಹಾ ವಿಕಾಸ ಅಘಾಡಿ) ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ನಾಲ್ಕು ದಿನದ ಫಡ್ನವೀಸ್ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನಿಭಾಯಿದ್ದ ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತೆ ಡಿಸಿಎಂ ಆಗಲಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಆದರೆ, ಮೂಲಗಳ ಪ್ರಕಾರ ಅಜಿತ್ ಪವಾರ್ ಇಂದೇ ಪ್ರಮಾಣ ವಚನ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಸಂಜೆ ಶಿವಾಜಿ ಪಾರ್ಕ್ನಲ್ಲಿ ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎನ್ಸಿಪಿ ನಾಯಕರಾದ ಜಯಂತ್ ಪಾಟೀಲ್ ಹಾಗೂ ಛಗನ್ ಭುಜ್ಬಲ್ ಸಹ ಉದ್ಧವ್ ಠಾಕ್ರೆ ನಂತರದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆ ನಡೆಯುವ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಿ ಮೋದಿಗೆ ನಿಯೋಜಿತ ಸಿಎಂ ಉದ್ಧವ್ ಠಾಕ್ರೆ ಸ್ವತಃ ಕರೆ ಮಾಡಿ ಆಹ್ವಾನ ನೀಡಿದ್ದಾರೆ.