ಮುಂಬೈ:ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಸೋಂಕು ಪರೀಕ್ಷೆಯ ವರದಿ ನೆಗೆಟಿವ್ ಬಂದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈ ಕುರಿತು ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದು, ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಅಭಿಷೇಕ್ ಬಚ್ಚನ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಆಸ್ಪತ್ರೆಯ ವೈದ್ಯರ ನಿಗಾದಲ್ಲಿದ್ದು, ಪ್ರತಿಯೊಬ್ಬರ ಹಾರೈಕೆ ಹಾಗೂ ಪ್ರಾರ್ಥನೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕೊರೊನಾ ಸೋಂಕಿನ ಕಾರಣಕ್ಕೆ ಜುಲೈ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ನಂತರ ಜುಲೈ 12ರಂದು ಸ್ವಲ್ಪ ಮಟ್ಟದ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಹಾಗೂ ಆರಾಧ್ಯ ಬಚ್ಚನ್ ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬಿಗ್ ಬಿ ಅಮಿತಾಬ್ ಬಚ್ಚನ್ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದು, ಇತ್ತೀಚಿಗೆ ಅಭಿಷೇಕ್, ಐಶ್ವರ್ಯ, ಆರಾಧ್ಯ ಅವರ ಭಾವಚಿತ್ರಗಳನ್ನು ಹಂಚಿಕೊಂಡು '' ನಾವು ನಿಮ್ಮ ಪ್ರೀತಿಯನ್ನು ಕಾಣುತ್ತಿದ್ದೇವೆ, ನಿಮ್ಮ ಪ್ರಾರ್ಥನೆ ಕೇಳುತ್ತಿದೆ'' ಎಂದು ಬರೆದು ಧನ್ಯವಾದ ಸಲ್ಲಿಸಿದ್ದರು.
ಈಗ ಐಶ್ವರ್ಯ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ಅಭಿಷೇಕ್ ಹಾಗೂ ಅಮಿತಾಬ್ ಕೂಡಾ ಬಿಡುಗಡೆಯಾಗುವ ಸಾಧ್ಯತೆಯಿದೆ.