ನವದೆಹಲಿ: ದೀಪಾವಳಿ ಸಂಭ್ರಮದಲ್ಲಿ ಮೈಮರೆತ ಜನತೆ ನಿಷೇಧವನ್ನು ಉಲ್ಲಂಘಿಸಿ ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿಯ ಹಲವೆಡೆ ವಾಯು ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ತಲುಪಿದೆ.
ಅಂಕಿಅಂಶಗಳ ಪ್ರಕಾರ, ಶನಿವಾರ ರಾತ್ರಿ 11ಗಂಟೆ ವೇಳೆಗೆ ವಾಯು ಗುಣಮಟ್ಟ ಸೂಚ್ಯಂಕದಂತೆ (ಎಕ್ಯೂಐ) ಗಾಳಿಯ ಗುಣಮಟ್ಟವು ಆನಂದ್ ವಿಹಾರದಲ್ಲಿ 481, ಐಜಿಐ ವಿಮಾನ ನಿಲ್ದಾಣ ಪ್ರದೇಶದಲ್ಲಿ 444, ಐಟಿಒನಲ್ಲಿ 457 ಹಾಗೂ ಲೋಧಿ ರಸ್ತೆ ಭಾಗಗಳಲ್ಲಿ 414ರಷ್ಟು ಕೆಳಮಟ್ಟಕ್ಕಿಳಿದಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಕ್ಷೀಣ ಶನಿವಾರ ತಡರಾತ್ರಿ ದೀಪಾವಳಿ ಸಂಭ್ರಮಾಚರಣೆ ವೇಳೆ ದೆಹಲಿಯಾದ್ಯಂತ ಹಲವೆಡೆ ದಟ್ಟ ಹೊಗೆ ಆವರಿಸಿರುವುದು ಕಂಡುಬಂದಿದೆ. ದೆಹಲಿ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಿದ್ದರೂ ಸಹ ಜನರು ಅದನ್ನು ಉಲ್ಲಂಘಿಸಿದ್ದಾರೆ.
ಗಾಳಿಯ ಗುಣಮಟ್ಟ ಹದಗೆಡುವುದು ಮತ್ತು ಕೋವಿಡ್-19 ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಪಶ್ಚಿಮ ಬಂಗಾಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.