ನವದೆಹಲಿ:ಆಗಸ್ಟ್ 7 ರಂದು ಕೇರಳದ ಕೋಯಿಕ್ಕೋಡ್ನಲ್ಲಿ ನಡೆದ ವಿಮಾನ ದುರಂತದ ವೇಳೆ ದಯೆ ಮತ್ತು ಮಾನವೀಯತೆ ತೋರಿದ ಮಲ್ಲಪುರಂ ನಿವಾಸಿಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೃತಜ್ಞತೆ ಸಲ್ಲಿಸಿದೆ.
ವಂದೇ ಭಾರತ್ ಮಿಷನ್ ಅಡಿ ದುಬೈನಿಂದ ಕೇರಳಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ವೇನಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ನೂರಾರು ಪ್ರಯಾಣಿಕರು ಗಾಯಗೊಂಡಿದ್ದರು. ಈ ವೇಳೆ ಕೊರೊನಾ ಭೀತಿಯನ್ನೆಲ್ಲಾ ಬದಿಗೊತ್ತಿ ರಕ್ಷಣಾ ಕಾರ್ಯಾಚರಣೆಗೆ ಮಲ್ಲಪುರಂ ಜನರು ಸಾಥ್ ನೀಡಿದ್ದರು.
"ಮಾನವೀಯತೆಗೊಂದು ಸಲಾಂ. ಅನಿಶ್ಚಿತ ಘಟನೆಯ ಸಮಯದಲ್ಲಿ ದಯೆ ಮತ್ತು ಮಾನವೀಯತೆ ತೋರಿದ ಕೇರಳದ ಮಲ್ಲಪುರಂ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. ನಾವು ನಿಮಗೆ ಋಣಿಯಾಗಿದ್ದೇವೆ. ಇದು ಕೇವಲ ಧೈರ್ಯವಲ್ಲ, ತಮ್ಮ ಜೀವವನ್ನು ಮುಡಿಪಾಗಿಟ್ಟು ಅನೇಕರ ಜೀವವನ್ನು ಉಳಿಸುವ ಮಾನವೀಯ ಗುಣ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟ್ವೀಟ್ ಮಾಡಿದೆ.
ಆಗಸ್ಟ್ 8 ರಂದು ಟ್ವೀಟ್ ಮಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ " ಸ್ಥಳೀಯರು ಹಾಗೂ ಅಧಿಕಾರಿಗಳ ತ್ವರಿತ ಕಾರ್ಯಾಚರಣೆ ಪ್ರಾಣಹಾನಿಯನ್ನು ಕಡಿಮೆ ಮಾಡಿತ್ತು. ಕೆಟ್ಟ ಹವಮಾನ ಪರಿಸ್ಥಿತಿ, ಕೋವಿಡ್ ನಡುವೆಯೂ ಜನರ ಕಾರ್ಯ ಮೆಚ್ಚುವಂತದ್ದು. ರಕ್ತದಾನ ಮಾಡಲು ನಿಂತವರ ಸರತಿ ಸಾಲು ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದ್ದರು.