ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ವಿಮಾನ ದರ ಏರಿಕೆಯಾಗಿ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ದೆಹಲಿ-ಶ್ರೀನಗರ ಮಾರ್ಗದ ವಿಮಾನ ಪ್ರಯಾಣ ದರವನ್ನು ತಗ್ಗಿಸಲಾಗಿದೆ.
ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಲು 6715 ರೂ. ಹಾಗೂ ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸಲು 6899 ರೂ. ನಿಗದಿ ಮಾಡಲಾಗಿದ್ದು, ಆಗಸ್ಟ್ 15ರವರೆಗೆ ಈ ದರ ಅನ್ವಯವಾಗಲಿದೆ.
ಉಗ್ರರ ಆತಂಕದಿಂದ ಅಮರನಾಥ ಯಾತ್ರಿಕರು ಕೂಡಲೇ ರಾಜ್ಯ ತೊರೆಯಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆ ಸೂಚಿಸಿದ ಬೆನ್ನಲ್ಲೇ ಯಾತ್ರಿಕರು ತಮ್ಮ ರಾಜ್ಯಗಳತ್ತ ಮುಖ ಮಾಡತೊಡಗಿದರು. ಆದರೆ ವಿಮಾನದ ಮೂಲಕ ಪ್ರಯಾಣಿಸಲು ಮುಂದಾದ ಯಾತ್ರಿಕರಿಗೆ ದರ ಕೇಳಿ ಶಾಕ್ ಆಗಿತ್ತು. ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಲು ಏಕಾಏಕಿ 9,500 ರೂ. ದರ ಏರಿಸಲಾಗಿತ್ತು. ಪ್ರಯಾಣಿಕರಿಂದ ದೂರು ಕೇಳಿಬಂದ ಹಿನ್ನೆಲೆ ವಿಮಾನಯಾನ ಸಚಿವಾಲಯವು ದರ ಇಳಿಸುವಂತೆ ಏರ್ ಇಂಡಿಯಾಗೆ ಸೂಚಿಸಿತ್ತು. ಅದರಂತೆ ಪ್ರಯಾಣ ದರದಲ್ಲಿ ಇಳಿಕೆ ಕಂಡುಬಂದಿದೆ.
ಇಲಾಖೆ ಸೂಚನೆಯಂತೆ ಇಂಡಿಗೋ, ವಿಸ್ತಾರ, ಸ್ಪೈಸ್ ಜೆಟ್, ಏರ್ ಏಷಿಯಾ ಸಂಸ್ಥೆಗಳು ಟಿಕೆಟ್ ಕ್ಯಾನ್ಸಲೇಷನ್ ಮೇಲಿನ ದರವನ್ನು ಮನ್ನಾ ಮಾಡಿವೆ.