ಹೊಸದಿಲ್ಲಿ: ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಚಿಕಿತ್ಸಾ ಸಲಕರಣೆಗಳನ್ನು ತಲುಪಿಸಲು ಏರ್ ಇಂಡಿಯಾ ಹಾಗೂ ಅಲೈಯನ್ಸ್ ಏರ್ ಸಂಸ್ಥೆಗಳ ಕಾರ್ಗೊ ವಿಮಾನಗಳನ್ನು ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಕೋವಿಡ್-19 ಚಿಕಿತ್ಸೆಗೆ ಬೇಕಾಗುವ ವೈದ್ಯಕೀಯ ಸಲಕರಣೆಗಳು ಹಾಗೂ ಅಗತ್ಯ ಚಿಕಿತ್ಸಾ ಉಪಕರಣಗಳ ಪೂರೈಕೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ.
"ಆಯಾ ರಾಜ್ಯಗಳ ತುರ್ತು ಬೇಡಿಕೆಗಳನ್ನಾಧರಿಸಿ ನಾಗರಿಕ ವಿಮಾನಯಾನ ಖಾತೆಯ ಹಿರಿಯ ಅಧಿಕಾರಿಗಳು ಸಲಕರಣೆಗಳ ಪೂರೈಕೆಗೆ ವ್ಯವಸ್ಥೆ ಮಾಡಲಿದ್ದಾರೆ. ನಂತರ ಈ ಸಲಕರಣೆಗಳನ್ನು ನಿರ್ದಿಷ್ಟ ಸ್ಥಳಗಳಿಗೆ ತಲುಪಿಸುವ ಏರ್ಪಾಟು ಮಾಡಲಾಗುವುದು. ಏರ್ ಇಂಡಿಯಾ ಹಾಗೂ ಅಲೈಯನ್ಸ್ ಏರ್ ವಿಮಾನಗಳ ಮೂಲಕ ಈ ಸಲಕರಣೆಗಳನ್ನು ಸಾಗಿಸಲಾಗುವುದು" ಎಂದು ನಾಗರಿಕ ವಿಮಾನಯಾನ ಖಾತೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.