ನವದೆಹಲಿ:ವಾರದ ಹಿಂದೆ ನಾಪತ್ತೆಯಾಗಿದ್ದ AN-32 ವಿಮಾನದ ಅವಶೇಷ ಪತ್ತೆ ಮಾಡಿರುವ ಭಾರತೀಯ ವಾಯುಪಡೆ, ಅವಘಡದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ವಿಮಾನದಲ್ಲಿದ್ದ 13 ಮಂದಿಯ ಮೃತದೇಹಗಳನ್ನು ಹಾಗೂ ಬ್ಲಾಕ್ ಬಾಕ್ಸ್ ಅನ್ನು ವಾಯುಪಡೆ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಬದುಕುಳಿದ ಯಾರೊಬ್ಬರನ್ನೂ ನಾವು ಪತ್ತೆ ಮಾಡಲಾಗಲಿಲ್ಲ. ಈ ಬಗ್ಗೆ ವಿಮಾನದಲ್ಲಿದ್ದ 13 ಮಂದಿಯ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದೆ.
8 ಮಂದಿಯ ರಕ್ಷಣಾ ತಂಡ ಇಂದು ವಿಮಾನ ಅಪಘಾತಕ್ಕೊಳಗಾದ ಪ್ರದೇಶ ತಲುಪಿತ್ತು.
ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ ಜಿ.ಎಂ ಚಾರ್ಲ್ಸ್, ಸ್ಕ್ವಾಡ್ರನ್ ಲೀಡರ್ ಹೆಚ್. ವಿನೋದ್, ಫ್ಲೈಟ್ ಲೆಫ್ಟಿನೆಂಟ್ ಆರ್. ತಾಪ, ಎ. ತನ್ವರ್, ಎಸ್, ಮೊಹಂತಿ, ಎಂ.ಕೆ ಜಾರ್ಜ್, ವಾರಂಟ್ ಆಫೀಸರ್ ಕೆ.ಕೆ. ಮಿಶ್ರ, ಸರ್ಜೆಂಟ್ ಅನೂಪ್ ಕುಮಾರ್, ಕಾರ್ಪೊರಲ್ ಶೆರೈನ್, ಲೀಡ್ ಏರ್ಕ್ರಾಫ್ಟ್ ಮನ್ ಎಸ್.ಕೆ. ಸಿಂಗ್, ಪಂಕಜ್, ನಾನ್ ಕಾಂಬಾಟೆಂಟ್ ಪುಟಾಲಿ ಹಾಗೂ ರಾಜೇಶ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.