ಲಾಹೋರ್:ಭ್ರಷ್ಟಾಚಾರ ಆರೋಪ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ನಿನ್ನೆ ಅವರಿಗೆ ಲಾಹೋರ್ ಹೈಕೋರ್ಟ್ನಿಂದ ವೈದ್ಯಕೀಯ ಕಾರಣ ನೀಡಿ ಜಾಮೀನು ನೀಡಲಾಗಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆ ಅವರಿಗೆ ಹೃದಯಾಘಾತವಾಗಿದೆ.
ಮೊನ್ನೆಯಷ್ಟೇ ನವಾಜ್ ಷರೀಫ್ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರ ಮಗ ಹುಸೇನ್ ಷರೀಫ್, ನಮ್ಮ ತಂದೆಗೆ ಜೈಲಿನಲ್ಲಿ ವಿಷ ಪ್ರಾಶನ ಮಾಡಿದ್ದಕ್ಕಾಗಿ ಅವರ ಆರೋಗ್ಯ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗಾಗಲೇ ಅವರ ರಕ್ತದ ಪ್ಲೇಟ್ಲೆಟ್ ಪ್ರಮಾಣ 16,000 ದಿಂದ 2,000ಕ್ಕೆ ಇಳಿಕೆಯಾಗಿವೆ ಎಂದು ತಿಳಿದು ಬಂದಿದೆ.
ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಲಂಚ ಪ್ರಕರಣದಲ್ಲಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ, ಹೀಗಾಗಿ ಅವರು ಜೈಲ್ಲಿನಲ್ಲಿದ್ದಾರೆ. ಈ ಹಿಂದೆ ಕೂಡ ಅವರಿಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು.