ಜೈಪುರ (ರಾಜಸ್ಥಾನ): ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿದೆ. ರಾಹುಲ್- ಪ್ರಿಯಾಂಕಾ ಸಂಧಾನ ಯಶಸ್ವಿ ಬಳಿಕ ಸಚಿನ್ ಪೈಲಟ್ ಪಕ್ಷಕ್ಕೆ ಮರಳಿದ್ದಾರೆ. ಗೆಹ್ಲೋಟ್ ಮತ್ತು ಪೈಲಟ್ ಬಣಗಳ ನಡುವಣ ಆರೋಪಗಳು ಪ್ರತ್ಯಾಪರೋಪಗಳು ನಿಂತು ಹೋಗಿವೆ.
ಸಂಧಾನದ ಬಳಿಕ ಇಂತಹ ಹೇಳಿಕೆಗೆ ಪಕ್ಷ ಕಡಿವಾಣ ಹಾಕಿದೆ. ಇನ್ನೊಂದೆಡೆ ಎರಡೂ ಬಣಗಳ ಯಾರೂ ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಈ ಬಗ್ಗೆ ಎಲ್ಲ ಶಾಸಕರಿಗೆ ಸಂದರ್ಶನ, ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಧ್ಯಮಗಳಲ್ಲಿ ಹೇಳಿಕೆ ಮತ್ತು ಸಂದರ್ಶನಗಳನ್ನು ನೀಡದಂತೆ ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ ಎಂದು ಶಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂಬುದನ್ನ ವೇಣುಗೋಪಾಲ್ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು. ಪಕ್ಷದ ಈ ಸೂಚನೆಯನ್ನ ಶಾಸಕರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.