ಅಹಮದಾಬಾದ್(ಗುಜರಾತ್):ನಾಳೆ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿದ್ದಾರೆ. ಅಹಮದಾಬಾದ್ನಲ್ಲಿ ಆಯೋಜನೆಗೊಂಡಿರುವ 'ನಮಸ್ತೆ ಟ್ರಂಪ್' ಮೆಗಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದು ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಅಹಮದಾಬಾದ್ ಪೊಲೀಸರು ತಮ್ಮ ಭದ್ರತಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಈ ಬಗ್ಗೆ ಅಹಮದಾಬಾದ್ ಪೊಲೀಸ್ ಕಮಿಷನರ್ ಆಶಿಶ್ ಭಾಟಿಯಾ ಮಾಧ್ಯಮಗಳ ಮುಂದೆ ವಿವರಿಸಿದ್ರು.
ನಾಳೆ ಅಹಮದಾಬಾದ್ಗೆ ಟ್ರಂಪ್ ಭೇಟಿ ಮೊಟೇರಾ ಸ್ಟೇಡಿಯಂ ಸುತ್ತಮುತ್ತ ಹಾಗು ನಗರಾದ್ಯಂತ ಭದ್ರತೆಗಾಗಿ 33 ಡೆಪ್ಯೂಟಿ ಪೊಲೀಸ್ ಕಮಿಷನರ್, 75 ಎಸಿಪಿ, 300 ಪೊಲೀಸ್ ಇನ್ಸ್ಪೆಕ್ಟರ್, 100 ಸಬ್ ಇನ್ಸ್ಪೆಕ್ಟರ್, 12000 ಜವಾನರು, 2000 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಸಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿಕೊಡಲಿದ್ದು, ಟ್ರಾಫಿಕ್ಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ ಎಂದರು.
ಇನ್ನು ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿದ್ದೇವೆ. ಬಂಧಿತರ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಆಯುಕ್ತರು ನಿರಾಕರಿಸಿದರು.
ಸೋಮವಾರ ಬೆಳಿಗ್ಗೆ 11.30ಕ್ಕೆ ಅಹಮದಾಬಾದ್ ಏರ್ಪೋರ್ಟ್ಗೆ ಟ್ರಂಪ್ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಂತರ 12 ಗಂಟೆಯಿಂದ ರೋಡ್ ಶೋ ಏರ್ಪಡಿಸಲಾಗಿದೆ. ಇದಾದ ಮೇಲೆ ಬೃಹತ್ ಮೊಟೇರಾ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮವಿದ್ದು, ನಂತ್ರ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಬಳಿಕ ಅವರು ಆಗ್ರಾಕ್ಕೆ ತೆರಳಲಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಕಮಿಷನರ್ ಆಶಿಶ್ ಭಾಟಿಯಾ ತಿಳಿಸಿದರು.