ನವದೆಹಲಿ: ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಕೋವಿಡ್ 19 ಸರ್ವವ್ಯಾಪಿ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳನ್ನು ಶ್ಲಾಘಿಸಿದ್ದಾರೆ.
ವೈದ್ಯರು, ಪೌರ ಕಾರ್ಮಿಕರು, ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಲಾಕ್ಡೌನ್ ಕ್ರಮ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ನಾವೆಲ್ಲೆರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡುವುದಕ್ಕಿಂತ ದೊಡ್ಡ ದೇಶಭಕ್ತಿ ಏನಿದೆ. ಮೂಲಭೂತ ಸುರಕ್ಷತಾ ಸಾಧನಗಳ ಕೊರತೆಯ ಹೊರತಾಗಿಯೂ ನಮ್ಮ ಯೋಧರು ಈ ಯುದ್ಧವನ್ನು ಎದುರಿಸುತ್ತಿದ್ದಾರೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ರಕ್ಷಣಾತ್ಮಕ ಸಾಧನಗಳ ಕೊರತೆಯ ಹೊರತಾಗಿಯೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಲಾಕ್ ಡೌನ್ ಅನ್ನು ಯಶಸ್ವಿಗೊಳಿಸಲು ಪೊಲೀಸರು ಮತ್ತು ಯೋಧರು ಕರ್ತವ್ಯದಲ್ಲಿದ್ದಾರೆ. ಪೌರ ಕಾರ್ಮಿಕರು ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳೂ ಸಹ ಅಗತ್ಯ ಸೇವೆಗಳನ್ನು ನೀಡಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆ ನಾವು ಅವರನ್ನು ಬೆಂಬಲಿಸಬೇಕು. ಇಲ್ಲವಾದರೆ. ಅವರ ಕೆಲಸಗಳು ಯಶಸ್ವಿಯಾಗುವುದಿಲ್ಲ. ನಾವು ಅವರನ್ನು ಬೆಂಬಲಿಸದಿದ್ದರೆ ಈ ಕಾರ್ಯ ಯಶಸ್ವಿಯಾಗುವುದಿಲ್ಲ. ವೈದ್ಯರ ವಿರುದ್ಧ ಹಲ್ಲೆಯ ವರದಿಗಳು ಬರುತ್ತಿವೆ. ಇದು ತಪ್ಪು, ಇದು ನಮ್ಮ ಸಂಸ್ಕೃತಿಯ ವಿರುದ್ಧ. ಈ ಹೋರಾಟದಲ್ಲಿ ನಾವು ಅವರನ್ನು ಬೆಂಬಲಿಸಬೇಕು ಎಂದಿದ್ದಾರೆ.
ನೀವೆಲ್ಲ ಕೊರೊನಾ ವಿರುದ್ಧ ಹೋರಾಡುವ ಹಿನ್ನೆಲೆ ವೈಯುಕ್ತಿಕವಾಗಿ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಈ ಯುದ್ಧದಲ್ಲಿ ಭಾಗಿಯಾಗಿದ್ದೀರಿ. ಈ ಹೋರಾಟದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಜೊತೆ ಇರಲಿದ್ದಾರೆ ಎಂದು ಐದು ನಿಮಿಷಗಳ ವಿಡಿಯೋ ಸಂದೇಶವನ್ನು ಭಾರತದ ಜನರಿಗೆ ತಲುಪಿಸಿದ್ದಾರೆ.
ಇನ್ನು ಇಂದು ಲಾಕ್ಡೌನ್ ಅಂತ್ಯಗೊಳ್ಳುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ 10 ಗಂಟೆಗೆ ದೇಶದ ಜನತೆ ಉದ್ದೇಶಿಸಿ ಮಾತನಾಡಲಿದ್ದಾರೆ.