ನವದೆಹಲಿ:ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಕೆಲ ದಿನಗಳಿಗೂ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ಮಹತ್ವದ ಮಾತುಗಳನ್ನಾಡಿದ್ದಾರೆ.
2010ರ ಅಲಹಾಬಾದ್ ಕೋರ್ಟ್ ಅಯೋಧ್ಯೆ ಭೂವಿವಾದದ ತೀರ್ಪು ನೀಡುವ ಸಂದರ್ಭದಲ್ಲಿ ಆ ವೇಳೆ ರಾಜಕೀಯ ಪಕ್ಷಗಳು ಹಾಗೂ ನಾಯಕರು ಅತ್ಯಂತ ಪ್ರಬುದ್ಧವಾಗಿ ವರ್ತಿಸಿದ್ದರು ಎನ್ನುವ ಮೂಲಕ ಸದ್ಯ ಅದನ್ನೇ ಎಲ್ಲ ಪಕ್ಷಗಳೂ ಅನುಸರಿಸಬೇಕು ಎಂದು ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಪರೋಕ್ಷವಾಗಿ ಹೇಳಿದ್ದಾರೆ.
ಈ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಭಾನುವಾರ ಪ್ರಸಾರವಾಗಿದ್ದು, ಅಯೋಧ್ಯೆಯ ವಿಚಾರವನ್ನು ಮೋದಿ ಪ್ರಸ್ತಾಪಿಸಿ ಕಿವಿಮಾತನ್ನು ಹೇಳಿದ್ದಾರೆ.
2010ರಲ್ಲಿ ಅಯೋಧ್ಯೆ ವಿವಾದದ ತೀರ್ಪು ಹೊರಬೀಳುವ ಸಂದರ್ಭದಲ್ಲಿ ಕೆಲ ಸಂಘಟನೆಗಳು ಪರಿಸ್ಥಿತಿಯನ್ನು ಹದಗೆಡಿಸಲು ಯತ್ನಿಸಿದ್ದವು. ಇದು ಸುಮಾರು ಹತ್ತು ದಿನಗಳ ಕಾಲ ನಡೆದಿತ್ತು. ಆದರೆ ರಾಜಕೀಯ ಪಕ್ಷಗಳು, ಸಾಮಜಿಕ ಸಂಘಟನೆಗಳು, ಧಾರ್ಮಿಕ ನಾಯಕರ ಒಗ್ಗಟ್ಟಿನಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಮೋದಿ ಆ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಅಯೋಧ್ಯೆ ಭೂವಿವಾದದ ವಿಚಾರಣೆ ಅ.16ರಂದು ಮುಕ್ತಾಯವಾಗಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್ ತಿಂಗಳಲ್ಲಿ ಈ ಐತಿಹಾಸಿಕ ತೀರ್ಪು ಪ್ರಕಟವಾಗಲಿದೆ.