ಉನ್ನಾವೋ/ಪಾಟ್ನಾ:ದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈ ಸಂಬಂಧ ಉತ್ತರ ಭಾರತದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೇರಳದಲ್ಲೂ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ದೇಶದ ಅತ್ಯಾಚಾರದ ರಾಜಧಾನಿ ಎಂಬ ಹಣೆಪಟ್ಟಿ ಹೊತ್ತುಕೊಂಡ ಉತ್ತರ ಪ್ರದೇಶದ ಉನ್ನಾವೋದಲ್ಲಿ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಬಿಹಾರ ರಾಜ್ಯದ ದರ್ಭಾಂಗದ ಸಾದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ ಟೆಂಪೋ ಟ್ರೈವರ್ ಒಬ್ಬನನ್ನು ಬಂಧಿಸಲಾಗಿದೆ.
ಕೇರಳದ ಕೊಟ್ಟಾಯಂನಲ್ಲೂ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕಂಜಿರಾಪಲ್ಲಿಯಲ್ಲಿ ಮನೆಯೊಳಗೆ ಕುಡಿಯಲು ನೀರು ಕೇಳಲು ಬಂದ ಆರೋಪಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನಲ್ಲಿ ನಿನ್ನೆಯಷ್ಟೇ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಆದರೂ ಅತ್ಯಾಚಾರಿಗಳಿಗೆ ಬಿಸಿ ಮುಟ್ಟಿರುವ ಹಾಗೆ ಕಾಣಿಸುತ್ತಿಲ್ಲ. ಅಲ್ಲದೆ ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಕೂಡಾ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದು, ಪುಟ್ಟ ಮಕ್ಕಳು, ಬಾಲಕಿಯರು ಸೇರಿದಂತೆ ಮಹಿಳೆಯರಿಗೆ ಮತ್ತಷ್ಟು ಭಯದ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ.