ಜಾರ್ಖಂಡ್:ನೀರು ಸಂರಕ್ಷಣೆ ಹಾಗೂ ನಿರ್ವಹಣೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಗೊಳಗಾಗಿದ್ದ ಜಾರ್ಖಂಡ್‌ನ ಅರಾ ಮತ್ತು ಕೇರಂ ಎಂಬ ಹಳ್ಳಿಗಳು ತಮ್ಮ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿವೆ. ರಾಂಚಿಯ ಅರಮಂಜ್ಹಿ ಬ್ಲಾಕ್‌ನ ಈ ಎರಡೂ ಗ್ರಾಮಗಳು ಇದೀಗ ಏಕ ಬಳಕೆ ಪ್ಲಾಸ್ಟಿಕ್ನಿಂದ ಮುಕ್ತಿ ಪಡೆದಿವೆ.
ಜಾರ್ಖಂಡ್ ರಾಜಧಾನಿ ರಾಂಚಿಯಿಂದ 25 ಕಿ.ಮೀ ಅಂತರದಲ್ಲಿ ಈ ಗ್ರಾಮಗಳಿವೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಅರಾ ಪಂಚಾಯ್ತಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಇಲ್ಲಿನ ಗ್ರಾಪಂ ಸದಸ್ಯರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನಿಯಮಗಳನ್ನು ಯಾರಾದ್ರೂ ಉಲ್ಲಂಘಿಸಿದ್ರೆ ಅವರಿಗೆ ದಂಡ ಹಾಕಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಾ ಕೇರಂ ಗ್ರಾಮದ ಮುಖಂಡ ಗೋಪಾಲ್ ಬೇಡಿಯಾ, ಈ ಬಗ್ಗೆ ನಾವು ಯಾರಿಂದಲೂ ಸ್ಫೂರ್ತಿ ಪಡೆದಿಲ್ಲ. ಗ್ರಾಮದಲ್ಲಿನ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಸಂಬಂಧ ಪ್ರತಿ ಗುರುವಾರ ಪಂಚಾಯ್ತಿ ವತಿಯಿಂದ ಸಭೆ ನಡೆಸಲಾಗುತ್ತೆ. ಹೀಗೆ ನಡೆಯುತ್ತಿದ್ದ ಸಭೆಯೊಂದರಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯ್ತು. ಪ್ಲಾಸ್ಟಿಕ್ ಎಲ್ಲರಿಗೂ ಹಾನಿಕಾರವಾಗಿದೆ. ಯಾರಾದ್ರೂ ನಿಯಮಗಳನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಚೀಲ ಬಳಕೆ ಮಾಡಿದ್ರೆ ಮೊದಲ ಬಾರಿಗೆ 150 ರೂಪಾಯಿ ದಂಡ ಹಾಕುತ್ತೇವೆ. ಮತ್ತೆ ಅದನ್ನೇ ಮುಂದುವರಿಸಿದ್ರೆ 500 ರೂಪಾಯಿ ದಂಡ ಹಾಕುತ್ತೇವೆ ಎನ್ನುತ್ತಾರೆ.