ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಕೇಂದ್ರ ತನಿಖಾ ದಳ(ಸಿಬಿಐ)ಗೆ ತನಿಖೆಯ ಹೊಣೆ ನೀಡುವಂತೆ ಬುಧವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ಸಿಬಿಐ ಮುಂಬೈ ಪೊಲೀಸರಿಗೆ ಪತ್ರ ಬರೆಯಲು ಸಜ್ಜಾಗಿದೆ. ಕಳೆದ ಎರಡು ತಿಂಗಳಲ್ಲಿ ದಾಖಲಿಸಲಾದ ಎಲ್ಲ ಸಾಕ್ಷ್ಯಗಳು ಮತ್ತು ಹೇಳಿಕೆಗಳನ್ನು ಪಡೆದುಕೊಳ್ಳಲು ಪತ್ರದಲ್ಲಿ ಸೂಚಿಸಲಾಗಿದೆ.
ಸಿಬಿಐ ಉನ್ನತ ಮೂಲಗಳ ಪ್ರಕಾರ, ತನಿಖೆಯಲ್ಲಿ ಸಂಗ್ರಹಿಸಲಾದ ಎಲ್ಲ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಏಜೆನ್ಸಿ ಮುಂಬೈ ಪೊಲೀಸರಿಗೆ ಪತ್ರ ಬರೆಯಲಿದೆ. ಕಳೆದ ಎರಡು ತಿಂಗಳುಗಳಲ್ಲಿ ದಾಖಲಿಸಿದ ಎಲ್ಲ ವ್ಯಕ್ತಿಗಳ ಹೇಳಿಕೆಗಳನ್ನು ಮತ್ತು ಮುಂಬೈ ಪೊಲೀಸರ ಬಳಿ ಇರುವ ನಟನ ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಸ್ಥೆ ನೀಡಲು ಸೂಚಿಸಲಾಗಿದೆ.
ಸುಶಾಂತ್ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಬಂದಿವೆ. 34 ವರ್ಷದ ನಟ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿಬಿಐ ಈಗಾಗಲೇ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಮತ್ತು ಅವರ ಅಕ್ಕ ರಾಣಿ ಸಿಂಗ್ ಅವರ ವಿಚಾರಣೆ ನಡೆಸಿದೆ.
ಬಿಹಾರ ಸರ್ಕಾರದ ಶಿಫಾರಸಿನ ಆಧಾರದ ಮೇಲೆ ಆಗಸ್ಟ್ 6ರಂದು ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್, ತಂದೆ ಇಂದ್ರಜಿತ್, ತಾಯಿ ಸಂಧ್ಯಾ, ಸುಶಾಂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಮಾಜಿ ಮ್ಯಾನೆಜರ್ ಶ್ರುತಿ ಮೋದಿ ಮತ್ತು ಅಪರಿಚಿತರ ವಿರುದ್ಧ ಸಿಬಿಐ ಈಗಾಗಲೇ ಪ್ರಕರಣ ದಾಖಲಿಸಿದೆ.
ಆಗಸ್ಟ್ 5ರಂದು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇಡಿ ಜುಲೈ 31ರಂದು ಸುಶಾಂತ್ ತಂದೆಯ ದೂರಿನ ಮೇರೆಗೆ ಬಿಹಾರ ಪೊಲೀಸ್ ಎಫ್ಐಆರ್ ದಾಖಲಿಸಿದ್ದರು. ಇದರ ಆಧಾರದ ಮೇಲೆ ರಿಯಾ, ಶೋಯಿಕ್, ಮಿರಾಂಡಾ, ಇಂದ್ರಜಿತ್, ಶ್ರುತಿ ಮೋದಿ, ಸುಶಾಂತ್ ಅವರ ಸಹೋದರಿ ಮೀತು ಸಿಂಗ್ ಮತ್ತು ಇತರರ ಹೇಳಿಕೆಗಳನ್ನು ಇಡಿ ದಾಖಲಿಸಿ ವಿಚಾರಣೆ ನಡೆಸಿದೆ.