ನವದೆಹಲಿ: ಅಮೆರಿಕದಿಂದ ಎರಡು ಡ್ರೋನ್‌ಗಳನ್ನು ಗುತ್ತಿಗೆ ಪಡೆದ ನಂತರ ಇದೀಗ ಭಾರತ ಮತ್ತೆ 10 ಡ್ರೋನ್‌ಗಳನ್ನು ತುರ್ತಾಗಿ ಖರೀದಿಸಲು ಮುಂದಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯು ಹಡಗಿನಲ್ಲಿ ಸಾಗಿಸುವ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ.
ಇದಕ್ಕೆ ಸರ್ಕಾರದ ಅನುಮೋದನೆ ಪಡೆದುಕೊಂಡಿದೆ. ಸುಮಾರು 1,300 ಕೋಟಿ ರೂ.ಗಳ ವೆಚ್ಚದಲ್ಲಿ ಈ 10 ಡ್ರೋನ್‌ಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ನೌಕಾಪಡೆಯು ಈ ಡ್ರೋನ್‌ಗಳನ್ನು ಬೈ ಗ್ಲೋಬಲ್ ವಿಭಾಗದ ಅಡಿಯಲ್ಲಿ ಮುಕ್ತ ಬಿಡ್ ಮೂಲಕ ಖರೀದಿಸಲಿದೆ.
ಹಾಗೆಯೇ ಶೀಘ್ರದಲ್ಲೇ ಅವುಗಳನ್ನು ಕಣ್ಗಾವಲು ಮತ್ತು ವಿಚಕ್ಷಣಾ ಚಟುವಟಿಕೆಗಳಿಗಾಗಿ ಯುದ್ಧನೌಕೆಗಳಲ್ಲಿ ನಿಯೋಜಿಸಲಿದೆ. ಪ್ರಮುಖವಾಗಿ ಚೀನಿಯರ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಮತ್ತು ಭಾರತದ ಸಮುದ್ರದ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಇತರೆ ಪ್ರದೇಶದಲ್ಲಿ ವಿರೋಧಿಗಳನ್ನು ಇದು ಪತ್ತೆ ಮಾಡುತ್ತದಂತೆ.