ಇಂದೋರ್ (ಮಧ್ಯಪ್ರದೇಶ): ಇಲ್ಲಿನ ಗೃಹ ಸಚಿವ ನರೋತ್ತಮ್ ಮಿಶ್ರಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದಿಲ್ಲ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ನಂತರ ಎಚ್ಚೆತ್ತುಕೊಂಡಿರುವ ಅವರು, ತಮ್ಮ ತಪ್ಪುಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಆರೋಗ್ಯ ಮಾನದಂಡಗಳನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
'ಮಾಸ್ಕ್ ಧರಿಸುವುದಿಲ್ಲ' ಹೇಳಿಕೆ ವಿಚಾರ: ತಪ್ಪೊಪ್ಪಿಗೆ ನೀಡಿದ ಸಚಿವ ನರೋತ್ತಮ್ ಮಿಶ್ರಾ - madhya Pradesh Latest News
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದಿಲ್ಲ ಎಂದು ಈ ಹಿಂದೆ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ, ಮುಂದಿನ ದಿನಗಳಲ್ಲಿ ಆರೋಗ್ಯ ಮಾನದಂಡಗಳನ್ನು ಪಾಲಿಸುತ್ತೇನೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
"ಮಾಸ್ಕ್ ಧರಿಸಿರುವುದರ ಬಗ್ಗೆ ನಾನು ನೀಡಿದ ಹೇಳಿಕೆಯಿಂದ ಕಾನೂನಿನ ಉಲ್ಲಂಘನೆಯಾಗಿದೆ. ನನ್ನ ತಪ್ಪನ್ನು ನಾನು ಒಪ್ಪುತ್ತೇನೆ ಮತ್ತು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅಷ್ಟೇ ಅಲ್ಲದೆ, ಇನ್ನು ಮುಂದೆ ಮಾಸ್ಕ್ ಧರಿಸುತ್ತೇನೆ" ಎಂದು ಮಿಶ್ರಾ ಗುರುವಾರ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಚಿವರಿಗೆ ಪತ್ರಕರ್ತ ಮಾಸ್ಕ್ ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದಾಗ, "ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳುವಾಗ ನಾನು ಮಾಸ್ಕ್ ಧರಿಸುವುದಿಲ್ಲ. ಅದರಲ್ಲಿ ಏನು ತಪ್ಪಿದೆ?" ಅವರು ಉತ್ತರಿಸಿದ್ದರು. ಈ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು.